ಹಠಾತ್ತಾಗಿ ಮೇಲೆ ಹಾರಿ, ಆಕಾಶದಲ್ಲೇ ಸ್ಫೋಟಗೊಂಡ ಚೀನಾ ರಾಕೆಟ್!
ಉಡಾವಣೆಗೆ ಸಿದ್ಧವಾಗಿದ್ದ ಬಾಹ್ಯಾಕಾಶ ರಾಕೆಟ್ ಇದ್ದಕ್ಕಿದ್ದಂತೆ ಆಕಾಶಕ್ಕೆ ಹಾರಿ ಸ್ಫೋಟಗೊಂಡ ಘಟನೆ ಚೀನಾದಲ್ಲಿ ನಡೆದಿದೆ. ಜೂನ್ (30) ಭಾನುವಾರದಂದು ರಾಕೆಟ್ ಉಡಾವಣೆಗೆ ಸಿದ್ಧತೆ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಸ್ವಲ್ಪ ಸಮಯದ ನಂತರ ಅದು ಪರ್ವತ ಪ್ರದೇಶದಲ್ಲಿ ಅಪ್ಪಳಿಸಿತು.
ಖಾಸಗಿ ಕಂಪನಿಗೆ ಸೇರಿದ ಈ ರಾಕೆಟ್ ಹೆಸರು ಟಿಯಾನ್ಲಾಂಗ್-3. ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಗುಡ್ಡಗಾಡು ಪ್ರದೇಶಕ್ಕೆ ರಾಕೆಟ್ ಅಪ್ಪಳಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಾಕೆಟ್ ಮತ್ತು ಉಡಾವಣಾ ವೇದಿಕೆಯ ನಡುವಿನ ಸಂಪರ್ಕದಲ್ಲಿ ರಚನಾತ್ಮಕ ದೋಷದಿಂದಾಗಿ ರಾಕೆಟ್ ಹಾರಿದೆ ಎಂದು ರಾಕೆಟ್ ತಯಾರಿಸಿದ ಕಂಪನಿ ಟಿಯಾನ್ಬಿಂಗ್ ಟೆಕ್ನಾಲಜೀಸ್ ಹೇಳಿಕೆಯಲ್ಲಿ ತಿಳಿಸಿದೆ.
ಆನ್ಬೋರ್ಡ್ ಕಂಪ್ಯೂಟರ್ನ ಸ್ವಯಂಚಾಲಿತ ಸ್ಥಗಿತದಿಂದಾಗಿ ಅಪಘಾತ ಸಂಭವಿಸಿದೆ ಎಂದು ಕಂಪನಿ ಬಹಿರಂಗಪಡಿಸಿದೆ. “ರಾಕೆಟ್ ಉಡಾವಣಾ ಸ್ಥಳದಿಂದ ನೈಋತ್ಯಕ್ಕೆ 1.5 ಕಿಲೋಮೀಟರ್ ಪರ್ವತ ಪ್ರದೇಶಗಳಲ್ಲಿ ಪತನಗೊಂಡಿದೆ” ಎಂದು ಅದು ಹೇಳಿದೆ. ಈ ಅವಘಡದಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಕಂಪನಿ ತಿಳಿಸಿದೆ. ಟಿಯಾನ್ಲಾಂಗ್-3 ಅನ್ನು ಮರುಬಳಕೆ ಮಾಡಬಹುದಾದ ರಾಕೆಟ್ನಂತೆ ವಿನ್ಯಾಸಗೊಳಿಸಲಾಗಿದೆ.