Politics

25 ವರ್ಷಕ್ಕೇ ಸಂಸತ್‌ ಪ್ರವೇಶಿಸುತ್ತಿರುವ ಅತ್ಯಂತ ಕಿರಿಯ ವಯಸ್ಸಿನ ಸಂಸದರಿವರು!

2024 ರ ಲೋಕಸಭಾ ಚುನಾವಣೆಯಲ್ಲಿ 25 ವರ್ಷ ವಯಸ್ಸಿನ ನಾಲ್ಕು ಅಭ್ಯರ್ಥಿಗಳು ಸಂಸತ್ತು ಪ್ರವೇಶಿಸುತ್ತಿದ್ದು, ಈ ಬಾರಿ ಸಂಸತ್ತು ಪ್ರವೇಶಿಸುತ್ತಿರುವ ಅತ್ಯಂತ ಕಿರಿಯ ಸಂಸದರೆನಿಸಿಕೊಂಡಿದ್ದಾರೆ.. ಇನ್ನು ಕರ್ನಾಟಕದ ಬೀದರ್‌ನಿಂದ ಕೇಂದ್ರ ಸಚಿವ ಭಗವಂತ್‌ ಖೂಬಾ ಅವರನ್ನು ಸೋಲಿಸಿ 26 ವರ್ಷದ ಸಾಗರ್‌ ಖಂಡ್ರೆ ಸಂಸತ್ತಿಗೆ ಹೋಗುತ್ತಿದ್ದಾರೆ..

ಸಂಸತ್ತಿಗೆ ಆಯ್ಕೆಯಾಗಿರುವ 25 ವರ್ಷದ  ಶಾಂಭವಿ ಚೌಧರಿ ಮತ್ತು ಸಂಜನಾ ಜಾತವ್ ಅವರು ಎಲ್‌ಜೆಪಿ ಮತ್ತು ಕಾಂಗ್ರೆಸ್‌ನಿಂದ ಕಣಕ್ಕಿಳಿದರೆ, ಪುಷ್ಪೇಂದ್ರ ಸರೋಜ್ ಮತ್ತು ಪ್ರಿಯಾ ಸರೋಜ್ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು.

ಶಾಂಭವಿ ಚೌಧರಿ

ಲೋಕ ಜನಶಕ್ತಿ ಪಕ್ಷದ (LJP) ನಾಯಕಿ ಶಾಂಭವಿ ಚೌಧರಿ ಅವರು ಬಿಹಾರದ ಸಮಸ್ತಿಪುರ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ..  25 ವರ್ಷದ ಶಾಂಭವಿ ಕಾಂಗ್ರೆಸ್‌ನ ಸನ್ನಿ ಹಜಾರಿ ಅವರನ್ನು 1,87,251 ಮತಗಳ ಅಂತರದಿಂದ ಸೋಲಿಸಿದರು. ಕೇವಲ 25 ವರ್ಷ ವಯಸ್ಸಿನ ಚೌಧರಿ ಮೂರನೇ ತಲೆಮಾರಿನ ರಾಜಕಾರಣಿ. ಆಕೆಯ ತಂದೆ ಅಶೋಕ್ ಚೌಧರಿ ಅವರು ಪ್ರಮುಖ ಜೆಡಿಯು ನಾಯಕರಾಗಿದ್ದಾರೆ ಮತ್ತು ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಸಚಿವರಲ್ಲಿ ಒಬ್ಬರು. ಅವರು ಈ ಹಿಂದೆ ಕಾಂಗ್ರೆಸ್‌ನಿಂದ ಜೆಡಿಯುಗೆ ಪಕ್ಷಾಂತರವಾಗಿದ್ದರು.

ಸಂಜನಾ ಜಾತವ್‌

25 ವರ್ಷ ವಯಸ್ಸಿನ ಸಂಜನಾ ಜಾತವ್ ದಲಿತ ಸಮುದಾಯಕ್ಕೆ ಸೇರಿದವರು. ಅವರು 2019 ರಲ್ಲಿ ಮಹಾರಾಜ ಸೂರಜ್ಮಲ್ ಬ್ರಿಜ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ಜಾತವ್ ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್ ಕ್ಯಾಪ್ಟನ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ.. 2023 ರ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ರಮೇಶ್ ಖೇಡಿ ವಿರುದ್ಧ 409 ಮತಗಳ ಕಡಿಮೆ ಅಂತರದಿಂದ ಸೋಲನ್ನು ಎದುರಿಸಿದ್ದರೂ, ಈಗ ಅವರು ಗೆದ್ದಿದ್ದಾರೆ. ಅವರು ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿದ್ದಾರೆ.

ಪುಷ್ಪೇಂದ್ರ ಸರೋಜ್

ಎಸ್‌ಪಿ ಅಭ್ಯರ್ಥಿ ಪುಷ್ಪೇಂದ್ರ ಸರೋಜ್ ಅವರು ಕೌಶಂಬಿ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ..  ಅವರ ಹತ್ತಿರದ ಪ್ರತಿಸ್ಪರ್ಧಿ ಮತ್ತು ಹಾಲಿ ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ಅವರನ್ನು 1,03,944 ಮತಗಳ ಭಾರಿ ಅಂತರದಿಂದ ಸೋಲಿಸಿದರು. ಸರೋಜ್ 5,09,787 ಮತಗಳನ್ನು ಗಳಿಸಿದರೆ, ವಿನೋದ್ ಕುಮಾರ್ ಸೋಂಕರ್ ಕೇವಲ 4,05,843 ಮತಗಳನ್ನು ಗಳಿಸಿದರು. ಈ ಗೆಲುವು ಪುಷ್ಪೇಂದ್ರ ಸರೋಜ್ ಅವರನ್ನು ದೇಶದ ಅತ್ಯಂತ ಕಿರಿಯ ಸಂಸದ ಸ್ಥಾನಕ್ಕೆ ಏರಿಸಿತು.

ಪ್ರಿಯಾ ಸರೋಜ್‌

ಪ್ರಿಯಾ ಸರೋಜ್ ಅವರು ಮಚ್ಲಿಶಹರ್ ಕ್ಷೇತ್ರವನ್ನು 35,850 ಮತಗಳ ಅಂತರದಿಂದ ಗೆದ್ದು ಹಾಲಿ ಬಿಜೆಪಿ ಸಂಸದ ಭೋಲಾನಾಥ್ ಅವರನ್ನು ಸೋಲಿಸಿದರು. ಪ್ರಿಯಾ ಮೂರು ಬಾರಿ ಸಂಸದರಾಗಿದ್ದ ತೂಫಾನಿ ಸರೋಜ್ ಅವರ ಪುತ್ರಿ.

Share Post