ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ!
ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪ್ರಚಂಡ ಗೆಲುವಿನ ಬೆನ್ನಲ್ಲೇ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶಗಳು ಜೋರಾಗಿವೆ.. ಕಳೆದ ರಾತ್ರಿಯೇ ಚಿಕ್ಕಬಳ್ಳಾಪುರದ ಪ್ರದೀಪ್ ಈಶ್ವರ್ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದೆ.. ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿರುವ ಶಾಸಕ ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲುಗಳನ್ನು ತೂರಲಾಗಿದ್ದು, ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ..
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಧಾಕರ್ ಅವರು ಒಂದು ಮತ ಲೀಡ್ ಪಡೆದರೂ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಅಂತ ಪ್ರದೀಪ್ ಈಶ್ವರ್ ಚಾಲೆಂಜ್ ಮಾಡಿದ್ದರು.. ಆದ್ರೆ ಸುಧಾಕರ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ 20 ಸಾವಿರಕ್ಕೂ ಅಧಿಕ ಮತಗಳ ಲೀಡ್ ಪಡೆದಿದ್ದಾರೆ.. ಹೀಗಾಗಿ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ನೀಡುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ.. ಹೀಗಿರುವಾಗಲೇ ಕಿಡಿಗೇಡಿಗಳು ಶಾಸಕರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ..
ರಾತ್ರಿ 10.15ರ ಸುಮಾರಿಗೆ ನಾಲ್ವರು ಹುಡುಗರು ಬಂದು ಕಲ್ಲು ತೂರಾಟ ಮಾಡಿದ್ದಾರೆ ಎಂದು ಪ್ರದೀಪ್ ಈಶ್ವರ್ ಸಹೋದರ ಚೇತನ್ ಆರೋಪ ಮಾಡಿದ್ದಾರೆ.. ಸುಧಾಕರ್ ಅವರ ಬೆಂಬಲಿಗರೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪ ಮಾಡಲಾಗಿದೆ.. ನಾಲ್ಕೈದು ಕಲ್ಲುಗಳನ್ನು ಎಸೆಯಲಾಗಿದ್ದು, ಸಿಸಿಟಿವಿ ಸೆನ್ಸಾರ್ ಆನ್ ಆಗುತ್ತಿದ್ದಂತೆ ಕಿಡಿಗೇಡಿಗಳು ಓಡಿಹೋಗಿದ್ದಾರೆ ಎಂದು ತಿಳಿದುಬಂದಿದೆ..