ಇಲ್ಲಿ ನಕಲಿ ಮದುವೆಗಳು ಅದ್ದೂರಿಯಾಗಿ ನಡೆಯುತ್ತವೆ; ನಕಲಿ ವರ ಬಾಡಿಗೆಗೆ ಸಿಗುತ್ತಾನೆ!
ಮದುವೆಗೆ ಮುಂಚೆಯೇ ತಾಯಿಯಾಗುವ ಯುವತಿಯರ ಸಂಖ್ಯೆ ಪ್ರಪಂಚದಾದ್ಯಂತ ಹೆಚ್ಚಾಗುತ್ತಿದೆ. ಆದರೆ ಹೀಗೆ ಮದುವೆಗೆ ಮೊದಲೇ ಮಗುವಿಗೆ ಜನ್ಮ ನೀಡಿ, ಸಮಾಜದ ಮುಂದೆ ತಲೆಎತ್ತಿ ತಿರುಗೋಕೆ ಆಗದೇ ಪರಿತಪಿಸುವವರೂ ಇದ್ದಾರೆ. ಇಂತಹ ಯುವತಿಯರಿಗಾಗಿ ಬಾಡಿಗೆ ಮದುಮಗನನ್ನು ನೀಡುವ, ನಕಲಿ ಮದುವೆ ಮಾಡಿಸುವ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಕೆಲ ದೇಶಗಳಲ್ಲಿ ಇಂತಹ ವ್ಯವಹಾರ ಜೋರಾಗಿ ನಡೆಯುತ್ತಿದೆ.
ವಿಯೆಟ್ನಾಂನಲ್ಲಿ ಇತ್ತೀಚೆಗೆ ಬಾಡಿಗೆ ಗಂಡಂದಿರನ್ನು ಹುಡುಕಿಕೊಡುವುದು ಹಾಗೂ ನಕಲಿ ಮದುವೆಗಳನ್ನು ಮಾಡಿಸುವ ಬ್ಯುಸಿನೆಸ್ ಜೋರಾಗಿ ನಡೆಯುತ್ತಿದೆ. ಅಂದಹಾಗೆ ವಿಯೆಟ್ನಾಂನಲ್ಲಿ ಅಬಾರ್ಷನ್‌ಗಳ ಸಂಖ್ಯೆ ತುಂಬ ಹೆಚ್ಚಿದೆ. ಕಳೆದ ವರ್ಷ ವಿಯೆಟ್ನಾಂನಲ್ಲಿ ೩ ಲಕ್ಷಕ್ಕೂ ಹೆಚ್ಚು ಅಬಾರ್ಷನ್‌ಗಳು ನಡೆದಿವೆ. ಮದುವೆಗೆ ಮುಂಚೆಯೇ ಯುವಕ, ಯುವತಿಯರು ಮನೆಯನ್ನು ಬಾಡಿಗೆಗೆ ಪಡೆದು ಒಟ್ಟಿಗೆ ಜೀವನ ಮಾಡುವವರ ಸಂಖ್ಯೆ ಇಲ್ಲಿ ಹೆಚ್ಚಿದೆ. ಈ ಕಾರಣದಿಂದ ಮದುವೆಗೆ ಮುಂಚೆಯೇ ಪ್ರಗ್ನೆಂಟ್ ಆಗುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.
ಹೀಗೆ ಮದುವೆಗೆ ಮುಂಚೆಯೇ ಪ್ರಗ್ನೆಂಟ್ ಆಗುವ ಯುವತಿಯರು ಸಮಾಜ ನಮ್ಮನ್ನು ನೋಡಿ ಏನಂದುಕೊಳ್ಳುತ್ತದೋ ಎಂದು ಭಯ ಬೀಳುತ್ತಿದ್ದಾರೆ. ಅಂತಹ ಯುವತಿಯ ಭಯವನ್ನೇ ಕೆಲ ಸಂಸ್ಥೆಗಳು ಭಾರಿ ಲಾಭ ನೀಡುವ ವ್ಯವಹಾರವನ್ನಾಗಿ ಮಾಡಿಕೊಂಡಿವೆ. ಇಂತಹ ಯುವತಿಯರಿಗೆ ನಕಲಿ ಮದುವೆಗಳನ್ನು ಮಾಡಿ, ಅವರನ್ನು ಸಮಾಜ ಏನಂದುಕೊಳ್ಳುತ್ತದೋ ಎಂಬ ಭಯದಿಂದ ಈ ಸಂಸ್ಥೆಗಳು ಪಾರು ಮಾಡುತ್ತಿವೆ. ಯುವತಿಯರು ಕೂಡಾ ಇವರ ಸೇವೆಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರಂತೆ..!
ಹೀಗೆ ನಕಲಿ ಮದುವೆ ಸೇವೆ ಪಡೆದ ಯುವತಿಯರಲ್ಲಿ ʻಖಾʼ ಎಂಬ ಹೆಸರಿನ ಯುವತಿ ಕೂಡಾ ಇದ್ದಾಳೆ. ಈಕೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದಳು. ಈ ವಿಷಯ ಗೊತ್ತಾದರೆ ತನ್ನ ತಂದೆ-ತಾಯಿಗಳು ಅವಮಾನಕ್ಕೆ ಗುರಿಯಾಗುತ್ತಾರೆ ಎಂದು ಆಕೆ ಭೀತಿಗೊಳಗಾಗಿದ್ದಳು. ಈ ವೇಳೆ ಆಕೆಗೆ ನಕಲಿ ಮದುವೆ ಮಾಡಿಸುವ ಸಂಸ್ಥೆಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಇಂತಹ ಸಂಸ್ಥೆಯ ಮೂಲಕ ಖಾ ತನ್ನ ಸಮಸ್ಯೆಯಿಂದ ಹೊರಬರುವ ಪ್ರಯತ್ನ ಮಾಡಿದ್ದಾಳೆ.
ʻನನಗೆ ಎಲ್ಲರಂತೆ ನಿಜವಾಗಿಯೂ ಮದುವೆಯಾದಂತೆ ತೋರಿಸಲು ಒಂದು ಸಂಸ್ಥೆ ಎಲ್ಲಾ ವ್ಯವಸ್ಥೆಯನ್ನೂ ಮಾಡಿತು. ಒಬ್ಬ ಮದುವೆ ಗಂಡನ್ನೂ ಬಾಡಿಗೆ ನೀಡಿತು. ಬಾಡಿಗೆ ಬಂಧುಗಳನ್ನು ಕರೆಸಿ, ನಕಲಿ ಮದುವೆ ಮಾಡಿಸಿತುʼ ಎನ್ನುತ್ತಾರೆ ಖಾ.
ಈ ನಕಲಿ ಮದುವೆಗೆ ೧೫೦೦ ಡಾಲರ್‌ಗಳಷ್ಟು ಖರ್ಚಾಗುತ್ತದೆ. ಖಾ ಹೊಟ್ಟೆಯಲ್ಲಿರುವ ಮಗುವಿಗೆ ಕಾರಣವಾದ ವ್ಯಕ್ತಿಯೇ ಆ ಹಣವನ್ನು ಭರಿಸಿದ್ದಾರೆ. ಯಾಕೆಂದರೆ ಆತನಿಗೆ ಈ ಮೊದಲೇ ಒಂದು ಮದುವೆಯಾಗಿತ್ತು. ಹೀಗಾಗಿ, ಖಾ ಜೊತೆಗಿನ ಸಂಬಂಧವನ್ನು ಮರೆಮಾಚಲು ಆತ ಖಾಗೆ ನಕಲಿ ಮದುವೆ ಏರ್ಪಾಟು ಮಾಡಿದ್ದ.
ಎಲ್ಲರಿಗೂ ಗೊತ್ತಾಗುವಂತೆ ಮದುವೆ ಕಾರ್ಯಕ್ರಮ ನಡೆದಿದ್ದರಿಂದಾಗಿ ಸಮಾಜದ ದೃಷ್ಟಿಯಲ್ಲಿ ಖಾಗೆ ಮದುವೆಯಾಗಿದೆ. ಕೆಲ ದಿನಗಳ ನಂತರ ಗಂಡ ನನ್ನನ್ನು ಬಿಟ್ಟು ಹೋಗಿದ್ದಾನೆ ಎಂದು ಪ್ರಪಂಚಕ್ಕೆ ಹೇಳಲು ಖಾ ತೀರ್ಮಾನಿಸಿದ್ದಾಳಂತೆ.
ಮದುವೆಗೆ ಮುಂಚೆಯೇ ತಾಯಿಯಾಗಿದ್ದೇನೆಂದು ಹೇಳಿ ಅವಮಾನಪಡುವುದಕ್ಕಿಂತ ಡಿವೋರ್ಸ್ ತೆಗೆದುಕೊಂಡ ಮಹಿಳೆಯಂತೆ ಜೀವನ ಮಾಡುವುದು ಒಳ್ಳೆಯದು ಎಂದು ಖಾ ಭಾವಿಸಿದ್ದಾಳೆ. ಅದರಂತೆ ಜೀವನ ಮಾಡೋದಕ್ಕೆ ಖಾ ತಯಾರಿ ನಡೆಸಿದ್ದಾಳೆ.
ಹೀಗೆ ಹಣ ತೆಗೆದುಕೊಂಡು ನಕಲಿ ಮದುವೆ ಮಾಡಿಸುವ ವ್ಯವಹಾರ ವಿಯೆಟ್ನಾಂನಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಆ ದೇಶದಲ್ಲಿ ೧೫ ವರ್ಷ ಮೇಲ್ಪಟ್ಟವರಲ್ಲಿ ಶೇಕಡಾ ೭೦ರಷ್ಟು ಜನ ಮದುವೆಯಾದವರೇ ಇದ್ದಾರೆ. ವಿಯೆಟ್ನಾಂನಲ್ಲಿರುವ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನ ೩೦ ವರ್ಷ ವಯಸ್ಸಿಗಿಂತ ಕೆಳಗಿನವರೇ ಇದ್ದಾರೆ. ಹೀಗಾಗಿ, ಮದುವೆಗೆ ಮುಂಚೆಯೇ ತಪ್ಪು ಮಾಡಿ, ಹೀಗೆ ನಕಲಿ ಮದುವೆ ಮಾಡಿಕೊಳ್ಳುವವರ ಸಂಖ್ಯೆ ಇಲ್ಲಿ ಹೆಚ್ಚುತ್ತಿದೆ.