ಯಾರನ್ನಾದರೂ ಬಂಧಿಸಬೇಕಾದರೆ ಪೊಲೀಸರು ಅನುಸರಿಸಬೇಕಾದ ನಿಯಮಗಳೇನು?
ಯಾವುದೇ ಒಬ್ಬ ವ್ಯಕ್ತಿಯನ್ನು ಪೊಲೀಸರು ಕಾರಣ ಹೇಳದೇ ಬಂಧಿಸಬಹುದೇ..? ಎಂತಹ ಪ್ರಕರಣದಲ್ಲಿ ವಾರಂಟ್ ನೀಡದೇ ವ್ಯಕ್ತಿಯನ್ನು ಬಂಧಿಸಬಹುದು..? ಒಬ್ಬ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಯಾವ ಷರತ್ತುಗಳನ್ನು ಅನುಸರಿಸಬೇಕು? ನಮ್ಮ ಸಂವಿಧಾನ ಬಂಧಿತರಿಗೆ ಯಾವ ಹಕ್ಕುಗಳನ್ನು ಒದಗಿಸುತ್ತದೆ..? ಈ ಬಗ್ಗೆ ತಿಳಿಯೋಣ ಬನ್ನಿ..
ನಮ್ಮ ಕಾನೂನು ಪ್ರಕಾರ ಬಂಧನ ಪ್ರಕ್ರಿಯೆ ಹೇಗಿರಬೇಕು..?
ರಾಷ್ಟ್ರೀಯ ಅಪರಾಧ ತನಿಖಾ ದಳದ ಪ್ರಕಾರ, ಪೊಲೀಸರು ನೇರವಾಗಿ ಯಾರನ್ನೂ ವಿಚಾರಣೆಗಾಗಿ ಬಂಧಿಸಬಾರದು.. ಆ ವ್ಯಕ್ತಿಯನ್ನು ಬಂಧಿಸಲು ‘ವಾರೆಂಟ್’ ಇರಬೇಕು. ಕೆಲವು ವಿಶೇಷ ಪ್ರಕರಣಗಳಲ್ಲಿ ವಾರಂಟ್ ಇಲ್ಲದೆಯೇ ಬಂಧನಗಳನ್ನು ಮಾಡಬಹುದು.. ಬಂಧನ ವಾರಂಟ್ ಎಂದರೆ ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ನ್ಯಾಯಾಲಯವು ಪೊಲೀಸರಿಗೆ ನೀಡಿದ ಲಿಖಿತ ಆದೇಶ ಅಷ್ಟೇ… ಈ ವಾರಂಟ್ ಅನ್ನು ತಪಾಸಣೆಗೆ ಸಹ ತೆಗೆದುಕೊಂಡು ಹೋಗಬಹುದು.. ಈ ವಾರಂಟ್ ಲಿಖಿತವಾಗಿರಬೇಕು, ನ್ಯಾಯಾಲಯದಿಂದ ಸಹಿ ಮಾಡಿರಬೇಕು.. ಅದರಲ್ಲಿ ಆರೋಪಿಯ ಹೆಸರು, ವಿಳಾಸ ಮತ್ತು ಆತನ ವಿರುದ್ಧದ ಆರೋಪಗಳ ವಿವರಗಳನ್ನು ಕೂಡಾ ಈ ವಾರಂಟ್ ಒಳಗೊಂಡಿರಬೇಕು.
ವಾರಂಟ್ಗಳಲ್ಲಿ ಎರಡು ವಿಧ.. ಒಂದನೆಯದು ಜಾಮೀನು ನೀಡಬಹುದಾದ ವಾರಂಟ, ಎರಡನೇ ಜಾಮೀನು ರಹಿತ ವಾರಂಟ್..
ವಾರಂಟ್ ಇಲ್ಲದೆ ಬಂಧನವನ್ನು ಯಾವಾಗ ಮಾಡಬಹುದು..?
ಒಬ್ಬ ವ್ಯಕ್ತಿಯು ಕಾಗ್ನಿಜಬಲ್ ಅಪರಾಧವನ್ನು ಎಸಗಿರುವ ಶಂಕಿತರಾಗಿದ್ದರೆ, ಪೊಲೀಸರು ವಾರಂಟ್ ಇಲ್ಲದೆ ಅವರನ್ನು ಬಂಧಿಸಬಹುದು. ಕೊಲೆ, ಅತ್ಯಾಚಾರ, ಸುಲಿಗೆ, ಕಳ್ಳತನ, ದೇಶದ ವಿರುದ್ಧದ ಪಿತೂರಿಯಂತಹ ಗಂಭೀರ ಅಪರಾಧಗಳು ಕಾಗ್ನಿಜಬಲ್ ಕ್ರೈಮ್ ಅಡಿಯಲ್ಲಿ ಬರುತ್ತವೆ. ಇದಲ್ಲದೆ, ಕದ್ದ ಸೊತ್ತು ಹೊಂದಿರುವವರು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಕಾನೂನು ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು ಮತ್ತು ಅಪರಾಧವನ್ನು ಮಾಡಲು ತಯಾರಿ ನಡೆಸುವುದು ಮುಂತಾದ ಪ್ರಕರಣಗಳಲ್ಲಿ ವ್ಯಕ್ತಿಯನ್ನು ವಾರಂಟ್ ಇಲ್ಲದೆ ಬಂಧಿಸಬಹುದು.
ಬಂಧನ ಪ್ರಕ್ರಿಯೆ ಹೇಗಿರಬೇಕು..?
CrPC ಯ ಸೆಕ್ಷನ್ 46 ರ ಪ್ರಕಾರ, ಒಬ್ಬ ವ್ಯಕ್ತಿಯ ಸುತ್ತ ಪೊಲೀಸರು ಸುತ್ತುಕೊಂಡಿದ್ದಾರೆ ಎಂದರೆ ಅದು ಅರೆಸ್ಟ್ ಆಗುವುದಿಲ್ಲ.. ನಿಮ್ಮನ್ನು ಅರೆಸ್ಟ್ ಮಾಡುತ್ತಿದ್ದೇವೆ ಎಂದು ಹೇಳುವುದರ ಮೂಲಕ ಅರೆಸ್ಟ್ ಮಾಡಬಹುದು.. ಯಾಕಂದ್ರೆ ಅರೆಸ್ಟ್ ಎಂದರೆ ಒಬ್ಬ ವ್ಯಕ್ತಿಯನ್ನು ಹಿಡಿವುದು ಅಲ್ಲವೇ ಅಲ್ಲ.. ವಶಕ್ಕೆ ತೆಗೆದುಕೊಳ್ಳುವುದು ಅಷ್ಟೇ.. ಬಂಧಿತ ವ್ಯಕ್ತಿಯನ್ನು ಸ್ಪರ್ಶಿಸುವುದು ಅಥವಾ ಹಿಡಿದಿಟ್ಟುಕೊಳ್ಳುವುದು ಅನಿವಾರ್ಯವಲ್ಲ.. ಆದ್ರೆ ಬಂಧನದ ಸಮಯದಲ್ಲಿ ಆರೋಪಿಗಳು ಬಲಪ್ರಯೋಗ ಮಾಡಿ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೆ ಪೊಲೀಸರು ಕೂಡಾ ಬಲಪ್ರಯೋಗ ಮಾಡಬಹುದು.. ಆದ್ರೆ ಪೊಲೀಸರು ಅಗತ್ಯವಿರುವಷ್ಟು ಬಲಪ್ರಯೋಗ ಮಾಡಬೇಕು. ಪೊಲೀಸರು ಅನಿವಾರ್ಯವಲ್ಲದಿದ್ದರೆ ವ್ಯಕ್ತಿಯ ಕೈಕಾಲು ಕಟ್ಟುವಂತಿಲ್ಲ. ಬಂಧಿತನು ಹಿಂಸಾತ್ಮಕವಾಗಿಲ್ಲದಿದ್ದರೆ ಅಥವಾ ತಪ್ಪಿಸಿಕೊಳ್ಳಲು ಪ್ರಯತ್ನಿಸದಿದ್ದರೆ ಪೊಲೀಸರು ಆತನಿಗೆ ಕೈಕೋಳ ಹಾಕುವ ಅಗತ್ಯವಿಲ್ಲ. ಒಬ್ಬ ವ್ಯಕ್ತಿಯನ್ನು ಬಂಧಿಸಿದ ನಂತರವೇ ಪೊಲೀಸರು ಶೋಧ ಕಾರ್ಯ ನಡೆಸಬೇಕು..
ಈ ತಪಾಸಣೆಯ ವೇಳೆ ಪೊಲೀಸರು ವಶಪಡಿಸಿಕೊಂಡ ಎಲ್ಲಾ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಬೇಕು ಮತ್ತು ಬಂಧಿತ ವ್ಯಕ್ತಿಗೆ ಅವುಗಳ ಬಗ್ಗೆ ಮಾಹಿತಿ ನೀಡಿ ರಶೀದಿ ನೀಡಬೇಕು. ಮಹಿಳೆಯರನ್ನು ಬಂಧಿಸಬೇಕಾದರೆ ಮಹಿಳಾ ಪೊಲೀಸ್ ಅಧಿಕಾರಿಗಳೇ ಇರಬೇಕು..
ಬಂಧಿತ ವ್ಯಕ್ತಿಗಳ ಹಕ್ಕುಗಳೇನು?
ಬಂಧಿತ ವ್ಯಕ್ತಿಗೆ ಕಾನೂನಿನ ಅಡಿಯಲ್ಲಿ ಕೆಲವು ಪ್ರಮುಖ ಹಕ್ಕುಗಳಿವೆ. ಅವರನ್ನು ಏಕೆ ಬಂಧಿಸುತ್ತಿದ್ದಾರೆ ಎಂಬುದನ್ನು ಪೊಲೀಸರೇ ಹೇಳಬೇಕು. ನೀವು ವಾರಂಟ್ ಮೇಲೆ ಬಂಧಿಸಿದರೆ, ವಾರಂಟ್ ಅನ್ನು ಪರಿಶೀಲಿಸುವ ಹಕ್ಕು ಆರೋಪಿಗಿದೆ. ನಿಮ್ಮ ಆಯ್ಕೆಯ ವಕೀಲರನ್ನು ಸಂಪರ್ಕಿಸಲು ನಿಮಗೆ ಹಕ್ಕಿದೆ. ನಿಮ್ಮನ್ನು ಬಂಧಿಸಿದ ನಂತರ, ಪೊಲೀಸರು ನಿಮ್ಮ ಬಂಧನದ ಕುರಿತು ನೀವು ಉಲ್ಲೇಖಿಸಿರುವ ವ್ಯಕ್ತಿ, ಸಂಬಂಧಿಕರು ಅಥವಾ ಸ್ನೇಹಿತರಿಗೆ ತಿಳಿಸಬೇಕು. ನಿಮ್ಮನ್ನು ಎಲ್ಲಿ ಇರಿಸಲಾಗಿದೆ ಎಂಬುದರ ಮಾಹಿತಿಯನ್ನೂ ನೀಡಬೇಕಾಗುತ್ತದೆ.. ನಿಮ್ಮನ್ನು ಬಂಧಿಸಿದ 24 ಗಂಟೆಗಳ ಒಳಗೆ ಹತ್ತಿರದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು. ನೀವು ಜಾಮೀನಿಗೆ ಅರ್ಹರಾಗಿದ್ದೀರೆ ಅದರ ಬಗ್ಗೆಯೂ ನಿಮಗೆ ತಿಳಿಸಬೇಕು.
ಮಹಿಳೆಯನ್ನು ಬಂಧಿಸುವ ನಿಯಮಗಳೇನು..?
ಮಹಿಳೆಯನ್ನು ಬಂಧಿಸುವಾಗ ಪೊಲೀಸ್ ಅಧಿಕಾರಿಗಳು ಕೆಲವು ನಿಯಮಗಳನ್ನು ಪಾಲಿಸಬೇಕು. CrPC ಯ ಸೆಕ್ಷನ್ 46 ರ ಪ್ರಕಾರ ಮಹಿಳೆಯನ್ನು ಬಂಧಿಸಲು ಮಹಿಳಾ ಪೊಲೀಸ್ ಅಧಿಕಾರಿಗಳೇ ಇರಬೇಕು.. ಮಹಿಳಾ ಪೊಲೀಸ್ ಇಲ್ಲದೇ ಪುರುಷ ಪೊಲೀಸರು ಮಹಿಳಾ ಆರೋಪಿಗಳನ್ನು ಬಂಧಿಸಬೇಕಾದರೆ ಅಧಿಕಾರಿಗಳು ಮಹಿಳೆಯನ್ನು ಮುಟ್ಟಬಾರದು. ಬಂಧನದ ನಂತರ ಮಹಿಳಾ ಪೊಲೀಸರು ಮಾತ್ರ ಆರೋಪಿಗಳನ್ನು ಪರಿಶೀಲಿಸಬೇಕು. ಜೊತೆಗೆ ಸೌಜನ್ಯದಿಂದ ವರ್ತನೆ ಮಾಡಬೇಕು.. ಮಹಿಳೆಯನ್ನು ಸಂಜೆ 6 ಗಂಟೆಯ ನಂತರ ಮತ್ತು ಬೆಳಗ್ಗೆ 6 ಗಂಟೆಯ ಮೊದಲು ಬಂಧಿಸಬಾರದು. ತುರ್ತು ಸಂದರ್ಭದಲ್ಲಿ ಮಾತ್ರ ಮಹಿಳೆಯನ್ನು ಈ ಸಮಯದಲ್ಲಿ ಬಂಧಿಸಬಹುದು. ಆದ್ರೆ ಅದಕ್ಕೂ ಮುನ್ನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯಬೇಕು. ಸಂವಿಧಾನದ 39ಎ ವಿಧಿಯ ಪ್ರಕಾರ, ಸ್ವಂತ ವಕೀಲರನ್ನು ಪಡೆಯಲು ಸಾಧ್ಯವಾಗದ ವ್ಯಕ್ತಿಗಳು ಉಚಿತ ಕಾನೂನು ನೆರವು ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಅವರಿಗೆ ಕಾನೂನು ನೆರವು ನೀಡುವುದು ವ್ಯವಸ್ಥೆಯ ಜವಾಬ್ದಾರಿಯಾಗಿದೆ.