Crime

ಬಿಟ್‌ ಕಾಯಿನ್‌ ಹ್ಯಾಕರ್‌ ದಿಢೀರ್‌ ಪ್ರತ್ಯಕ್ಷ; ಠಾಣೆಗೆ ಹಾಜರಾಗಿ ಸಹಿ

ಬೆಂಗಳೂರು: ಜಾಮೀನಿನ ಮೇಲೆ ಬಿಡುಗಡೆಯಾದ ಮೇಲೆ ನಾಪತ್ತೆಯಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಕೊನೆಗೂ ಕಾಣಿಸಿಕೊಂಡಿದ್ದಾನೆ. ಭಾನುವಾರ ಸಂಜೆ ಜೀವನಭೀಮಾ ನಗರ ಠಾಣೆ ಬಂದು ಸಹಿ ಹಾಕಿಹೋಗಿದ್ದಾನೆ ಎಂದು ಗೊತ್ತಾಗಿದೆ.


ಉದ್ಯಮಿಯೊಬ್ಬರ ಪುತ್ರ ಹಾಗೂ ಶ್ರೀಕಿ ಡ್ರಗ್ಸ್‌ ಸೇವನೆ ಮಾಡಿ ಹೋಟೆಲ್‌ ಒಂದರ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದರು. ಡ್ರಗ್ಸ್‌ ಪ್ರಕರಣದಲ್ಲಿ ಅಂದರ್‌ ಆಗಿದ್ದ ಶ್ರೀಕಿ, ವಿರುದ್ಧ ಬಿಟ್‌ ಕಾಯಿನ್‌ ಹಗರಣ ಕೂಡಾ ಕೇಳಿಬಂದಿತ್ತು. ಡ್ರಗ್ಸ್‌ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ ಶ್ರೀಕಿ, ನಂತರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಕೋರ್ಟ್‌ ಷರತ್ತು ಬದ್ಧ ಜಾಮೀನು ನೀಡಿತ್ತು. ಪ್ರತಿ ತಿಂಗಳು ಎರಡು ಮತ್ತು ನಾಲ್ಕನೇ ಶನಿವಾರ ಠಾಣೆಗೆ ಬಂದು ಸಹಿ ಹಾಕಿ ಹೋಗಬೇಕು ಎಂದು ಕೋರ್ಟ್‌ ಹೇಳಿತ್ತು. ಅದರಂತೆ ಶ್ರೀಕಿ ಡಿಸೆಂಬರ್‌ 11ರಂದು ಠಾಣೆಗೆ ಬರಬೇಕಿತ್ತು. ಆದರೆ ಆತ ಬಂದಿರಲಿಲ್ಲ. ಹೀಗಾಗಿ ಶ್ರೀಕಿ ಜಾಮೀನು ರದ್ದುಗೊಳಿಸುವಂತೆ ಕೋರ್ಟ್‌ ಗೆ ಮನವಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದರು. ಈ ಬೆನ್ನಲ್ಲೇ ಭಾನುವಾರ ಸಂಜೆ ತಮ್ಮ ವಕೀಲರ ಜೊತೆ ಠಾಣೆಗೆ ಬಂದಿರುವ ಶ್ರೀಕಿ, ಸಹಿ ಹಾಕಿ ಹೋಗಿದ್ದಾನೆ. ಡಿಸೆಂಬರ್‌ ೨೫ ರಂದು ಮತ್ತೆ ಠಾಣೆಗೆ ಬರಲು ಸೂಚಿಸಲಾಗಿದೆ.

Share Post