ಒಂದು ಸಾವಿರ ಎಕರೆ ಭೂಮಿ ದತ್ತು ಪಡೆಯಲಿದ್ದಾರೆ ನಟ ನಾಗಾರ್ಜುನ
ಹೈದರಾಬಾದ್: ಗ್ರೀನ್ ಇಂಡಿಯಾ ಚಾಲೆಂಜ್ ಅನ್ನು ಭಾರತದಾದ್ಯಂತ ಸೆಲಬ್ರೆಟಿಗಳು ಅಂಗೀಕರಿಸಿ, ಭೂಮಿ ದತ್ತು ಪಡೆದು ಅಲ್ಲಿ ಗಿಡ ನೆಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಚಾಲೆಂಜ್ಗೆ ಟಾಲಿವುಡ್ ನಟರು ಹೊರತಾಗಿಲ್ಲ. ಯಾಕಂದ್ರೆ ಎಂಪಿ ಜೋಗಿನಪಲ್ಲಿ ಸಂತೋಷ್ ಕುಮಾರ್ ಅವರು ಗ್ರೀನ್ ಇಂಡಿಯಾ ಚಾಲೆಂಜ್ ಹೆಸರಿನಲ್ಲಿ ದೇಶದಾದ್ಯಂತ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕೆಲವು ಸಿನಿಮಾ ನಟ-ನಟಿಯರ ಮೂಲಕ ಈ ಚಾಲೆಂಜ್ನ್ನು ಒಬ್ಬರಿಂದ ಒಬ್ಬರಿಗೆ ನೀಡುತ್ತಾ ಬಂದಿದ್ದಾರೆ. ಇವರ ಮೂಲಕ ಕಾಡು, ಖಾಲಿ ಸ್ಥಳಗಳನ್ನು ದತ್ತು ತೆಗೆದುಕೊಂಡು ಅದರಲ್ಲಿ ಸಸಿ ನೆಡುವಂತೆ ಕರೆ ಕೊಟ್ಟಿದ್ದಾರೆ. ಇಲ್ಲಿವರೆಗೆ ಸುಮಾರು 16ಕೋಟಿ ಗಿಡಗಳನ್ನು ನೆಟ್ಟಿರುವುದಾಗಿ ಮೊನ್ನೆ ತೆಲುಗು ಬಿಗ್ಬಾಸ್ ಶೋನಲ್ಲಿ ಸಂತೋಷ್ ಹೇಳಿದ್ರು. ಅವರ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿರುವ ನಟ ನಾಗಾರ್ಜುನ ಕೂಡ ಸಂತೋಷ್ ಅವರು ಎಲ್ಲಿ ಹೇಳಿದ್ರೆ ಅಲ್ಲಿ ಒಂದು ಸಾವಿರ ಎಕರೆ ಭೂಮಿ ದತ್ತು ಪಡೆದು ಗಿಡ ನೆಡುವುದಾಗಿ ಮಾತು ಕೊಟ್ಟಿದ್ದಾರೆ. ಈಗಾಗಲೇ ಪ್ರಭಾಸ್ 1,650ಎಕರೆ ದತ್ತು ಪಡೆದು ಅದನ್ನು ಹರಿತವನ ಎಂದು ನಾಮಕರಣ ಮಾಡಿದ್ದಾರೆಂದು ತಿಳಿಸಿದ್ರು. ಶರ್ವಾನಂದ್ ಒಂದು ಪಾರ್ಕ್ ದತ್ತು ಪಡೆದು ಅಭಿವೃದ್ಧಿ ಮಾಡಿದ್ದಾರೆ ಎನ್ನಲಾಗಿದೆ ಇವರ ಸಾಲಿಗೆ ಇನ್ನು ಮುಂದೆ ನಾಗಾರ್ಜುನ ಕೂಡ ಸೇರಲಿದ್ದಾರೆ.