ಸುಮಲತಾ ಸೈಲೆನ್ಸ್, ದರ್ಶನ್ ಕಾಂಗ್ರೆಸ್ ಸಪೋರ್ಟ್ ಕುಮಾರಸ್ವಾಮಿಗೆ ಮುಳುವಾಗುತ್ತಾ..?
ಮಂಡ್ಯ; ಮಂಡ್ಯ ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದೆ.. ಒಂದು ಕಡೆ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಕುಮಾರಸ್ವಾಮಿ ಕಣದಲ್ಲಿದ್ದರೆ, ಕಾಂಗ್ರೆಸ್ ನಿಂದ ಸ್ಟಾರ್ ಚಂದ್ರು ಅಖಾಡದಲ್ಲಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗಿರುವ ಸಂಸದೆ ಸುಮಲತಾ ಅಂಬರೀಶ್ ಸೈಲೆಂಟಾಗಿದ್ದಾರೆ. ಇತ್ತ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಕೆಲಸ ಮಾಡುತ್ತಿದ್ದಾರೆ. ಇದನ್ನು ನೋಡಿದರೆ ಮಂಡ್ಯ ಕುಮಾರಸ್ವಾಮಿಗೆ ಮುಳುವಾಗುತ್ತಾ ಎಂಬ ಅನುಮಾನ ಮೂಡುತ್ತಿದೆ.
ಸ್ಟಾರ್ ಚಂದ್ರು ಪರ ನಟ ದರ್ಶನ್ ಪ್ರಚಾರ;
ಟಿಕೆಟ್ ಸಿಗದಿದ್ದರಿಂದ ಕಣದಿಂದ ಹಿಂದೆ ಸರಿದ ಸುಮಲತಾ ಅವರು, ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಾರೆ ಎಂದು ಭಾವಿಸಲಾಗಿತ್ತು. ಆದ್ರೆ ಅವರು ಈವರೆಗೆ ಪ್ರಚಾರಕ್ಕೆ ಬಂದಿಲ್ಲ. ಇತ್ತ ಮಗ ಎಂದೇ ಬಿಂಬಿತವಾಗಿರುವ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ಇಂದು ಅವರು ಮಳವಳ್ಳಿ ಕ್ಷೇತ್ರದಲ್ಲಿ ರೋಡ್ ಶೋ ಮಾಡಿದ್ದಾರೆ. ಕಳೆದ ಬಾರಿ ಕೂಡಾ ಯಶ್ ಹಾಗೂ ದರ್ಶನ್ ಅವರು ಸುಮಲತಾ ಪರ ಪ್ರಚಾರ ಮಾಡಿದ್ದರಿಂದ ಸುಮಲತಾ ಗೆದ್ದಿದ್ದರು. ಈಗ ದರ್ಶನ್ ಕಾಂಗ್ರೆಸ್ ಪರ ನಿಂತಿದ್ದಾರೆ. ಹೀಗಾಗಿ ಮಂಡ್ಯ ಕದನ ಕುತೂಹಲಕ್ಕೆ ಕಾರಣವಾಗಿದೆ.
ಈ ಬಾರಿ ಹೆಚ್ಚು ಕಾಂಗ್ರೆಸ್ ಶಾಸಕರು;
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರಿದ್ದರು. ಜೊತೆಗೆ ಕಾಂಗ್ರೆಸ್ ಬೆಂಬಲ ಕೂಡಾ ಇತ್ತು. ಆದರೂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಸೋತಿದ್ದರು. ಈ ಬಾರಿ ಬಹುತೇಕ ಕಾಂಗ್ರೆಸ್ ಶಾಸಕರಿದ್ದಾರೆ. ಸ್ಟಾರ್ ಒಳ್ಳೆ ಇಮೇಜ್ ಬೆಳೆಸಿಕೊಂಡಿದ್ದಾರೆ. ಜೊತೆಗೆ ಹಣಬಲ ಕೂಡಾ ಇದೆ. ಲೋಕಲ್ ಎಂಬ ಪ್ಲಸ್ ಪಾಯಿಂಟ್ ಕೂಡಾ ಇದೆ.. ಇದರ ನಡುವೆ ದರ್ಶನ್ ಅಭಯ ಸಿಕ್ಕಿದೆ. ಹೀಗಾಗಿ ಈ ಬಾರಿಯೂ ಕುಮಾರಸ್ವಾಮಿಗೆ ಮುಳುವಾಗುತ್ತಾ ಎಂಬ ಅನುಮಾನ ಕಾಡುತ್ತಿದೆ.
ಕಾಂಗ್ರೆಸ್ ಗೆ ಮಹಿಳಾ ಶಕ್ತಿಯ ಬಲ;
ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳು ಗ್ರಾಮೀಣ ಜನರಿಗೆ ಸಾಕಷ್ಟು ಅನುಕೂಲವಾಗಿವೆ.. ಅದರಲ್ಲೂ ಹೆಂಗಸರು ಇದರಿಂದ ಸಂತೃಪ್ತರಾಗಿದ್ದಾರೆ. ಹೀಗಾಗಿ ಈ ಬಾರಿ ಮಹಿಳೆಯರು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಕೈಹಿಡಿಯುವ ನಿರೀಕ್ಷೆ ಇದೆ. ಜೊತೆಗೆ ಗೌಡರ ಕುಟುಂಬ ರಾಜಕೀಯ ಮಾಡುತ್ತಾರೆ. ಅವರ ಕುಟುಂಬದವರೇ ಸ್ಪರ್ಧಿಸುತ್ತಾರೆ ಎಂಬ ಅಪವಾದವೂ ಇದೆ.. ಹೀಗಾಗಿ ಮಂಡ್ಯ ಕದನ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತಿದೆ. ಕುಮಾರಸ್ವಾಮಿ ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶ ಸಿಗುವುದರಿಂದ ಮಂಡ್ಯಕ್ಕೆ ಅನುಕೂಲವಾಗುತ್ತೆ ಎಂದು ಕೆಲವರು ಹೇಳುತ್ತಾರೆ. ಆದ್ರೆ ನೆಕ್ ಟು ನೆಕ್ ಫೈಟ್ ಅಂತೂ ಇದ್ದೇ ಇದೆ.