National

ಬೆಂಗಳೂರಿನಲ್ಲಿ ಕೆಲಸ ಮಾಡಿದ್ದ ಕ್ಯಾಪ್ಟನ್ ವರುಣ್‌ ಸಿಂಗ್‌; ಬದುಕುಳಿದ ಯೋಧನಿಗೆ ಮುಂದುವರಿದ ಚಿಕಿತ್ಸೆ

ವೆಲ್ಲಿಂಗ್ಟನ್‌: ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಬದುಕುಳಿದಿರುವ ಏಕೈಕ ಅಧಿಕಾರಿ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌. ಇವರಿಗೂ ಕೂಡಾ ತೀವ್ರ ಗಾಯಗಳಾಗಿವೆ. ವೆಲ್ಲಿಂಗ್ಟನ್‌ ಆಸ್ಪತ್ರೆಯಲ್ಲಿ ಜೀವ ರಕ್ಷಕಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿದೆ.


ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌ ತಂದೆ ಕೂಡಾ ಸೇನೆಯಲ್ಲಿ ಕೆಲಸ ಮಾಡಿದ್ದರು. ಅವರ ತಂದೆ ಹೆಸರು ಕೆ.ಪಿ.ಸಿಂಗ್‌. ಇವರು ಕರ್ನಲ್‌ ಆಗಿ ಎಎಡಿ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಸಹೋದರ ಲೆಫ್ಟಿನೆಂಟ್ ಕರ್ನಲ್ ತಂಜು ಸಿಂಗ್ ಕೂಡಾ ಭಾರತೀಯ ನೌಕಾ ಪಡೆಯಲ್ಲಿದ್ದಾರೆ. ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರು, ಬೆಂಗಳೂರಿನ ವಾಯುಪಡೆ ತರಬೇತಿ ಶಿಬಿರದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌ ಪರೀಕ್ಷಾ ಪೈಲೆಟ್ ಆಗಿ ಈ ಹಿಂದೆ ಸೇವೆ ಸಲ್ಲಿಸಿದ್ದರು. ಈ ವೇಳೆ ಹಗುರ ಯುದ್ಧ ವಿಮಾನ ತೇಜಸ್ ನಿರ್ವಹಣೆ ನೋಡಿಕೊಳ್ಳುತ್ತಿದ್ದರು ಎಂದು ಗೊತ್ತಾಗಿದೆ.


2020ರ ಅಕ್ಟೋಬರ್ 12ರಂದು ತೇಜಸ್ ವಿಮಾನದ ನಿರ್ವಹಣೆ, ಒತ್ತಡ ನಿರ್ವಹಣೆ ಕೆಲಸಗಳು ಪೂರ್ಣಗೊಂಡಿದ್ದವು. ಅಂದು ವರುಣ್ ಸಿಂಗ್ ತೇಜಸ್‌ ವಿಮಾನದ ಸುರಕ್ಷತಾ ಪರೀಕ್ಷೆಗಾಗಿ ಪ್ರಾಯೋಗಿಕ ಹಾರಾಟ ನಡೆಸಿದ್ದರು. ಈ ವೇಳೆ ಕಾಕ್‌ ಪಿಟ್‌ ಒತ್ತಡ ನಿರ್ವಹಣಾ ವ್ಯವಸ್ಥೆ ಹದಗೆಟ್ಟಿತ್ತು. ದುರಂತ ಸಂಭವಿಸುವ ಅಪಾಯವಿತ್ತು. ಆದರೆ ಪೈಲಟ್‌ ಆಗಿದ್ದ ವರುಣ್‌ ಸಿಂಗ್‌ ಧೈರ್ಯವಾಗಿದ್ದರು. ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಿಸಿದ್ದರು. ವಿಮಾನದಲ್ಲಿದ್ದ ಹಲವು ಯೋಧರ ಪ್ರಾಣವನ್ನು ಉಳಿಸಿದ್ದರು. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ಅವರಿಗೆ 2021ರ ಆಗಸ್ಟ್‌ 15 ರಂದು ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಷ್ಟೇ ಅಲ್ಲ, ಶೌರ್ಯ ಚಕ್ರ ಪ್ರಶಸ್ತಿಯನ್ನೂ ವರುಣ್‌ ಸಿಂಗ್‌ ತಮ್ಮ ಮುಡಿಗೇರಿಸಿಕೊಂಡಿದ್ದರು.


ಕೂನೂರು ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌ಗೆ ವೆಲ್ಲಿಂಗ್ಟನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ಸಂಜೆಯೇ ಚೆನ್ನೈನ ವೈದ್ಯರ ತಂಡ ವರುಣ್‌ ಸಿಂಗ್‌ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದೆ. ಅದಕ್ಕೂ ಮುನ್ನ ವರುಣ್‌ ಎಚ್ಚರವಿದ್ದರು. ಪತ್ನಿಯ ಜೊತೆ ಮಾತನಾಡಬೇಕೆಂದು ಕೋರುತ್ತಿದ್ದರು.

 

Share Post