Politics

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಲ್ಯಾಂಡ್‌ ಜಿಹಾದ್‌ ಆರೋಪ ಮಾಡಿದ ಆರ್‌.ಅಶೋಕ್‌!

ಬೆಂಗಳೂರು; ಬೆಂಗಳೂರಿನ ಹೃದಯ ಭಾಗದಲ್ಲಿರುವ ಸುಮಾರು 500 ಕೋಟಿ ರೂಪಾಯಿ ಬೆಲೆಬಾಳುವ ಪಶುಸಂಗೋಪನಾ ಇಲಾಖೆಯ 2 ಎಕರೆ ಜಾಗವನ್ನು ಮುಸ್ಲಿಮರಿಗೆ ನೀಡಲು ಸರ್ಕಾರ ಹುನ್ನಾರ ಮಾಡಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಆರೋಪ ಮಾಡಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ʻಎಕ್ಸ್‌ʼ ನಲ್ಲಿ ಬರೆದುಕೊಂಡಿದ್ದು, ಇದನ್ನು ಲ್ಯಾಂಡ್‌ ಜಿಹಾದ್‌ ಎಂದು ಕರೆಯಬಹುದೇ..? ಎಂದು ಪ್ರಶ್ನೆ ಮಾಡಿದ್ದಾರೆ. ಪಶುಸಂಗೋಪನಾ ಇಲಾಖೆಗೆ ಸೇರಿದ ಜಾಗವನ್ನು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣಕ್ಕಾಗಿ ಸರ್ಕಾರ ಹಸ್ತಾಂತರ ಮಾಡಿದೆ. ಈ ಹಿನ್ನೆಲೆಯಲ್ಲಿ ಆರ್‌.ಅಶೋಕ್‌ ಈ ಆರೋಪ ಮಾಡಿದ್ದಾರೆ.

ಇದನ್ನೂ ಓದಿ; 44 ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿಗಮ-ಮಂಡಳಿ ಸ್ಥಾನ; ಸಾಧು ಕೋಕಿಲಗೂ ಸಿಕ್ತು ಹುದ್ದೆ

ಪಶುಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಕಟ್ಟಿದ್ದ ಪಶು ಚಿಕಿತ್ಸಾಲಯವನ್ನು ಮುಚ್ಚಿಸಿ ಮುಸ್ಲಿಂ ಸಮುದಾಯಕ್ಕೆ ಈ ಜಾಗ ನೀಡುವ ಅನಿವಾರ್ಯತೆ ಏನಿದೆ ಎಂದು ಆರ್‌.ಅಶೋಕ್‌ ಪ್ರಶ್ನೆ ಮಾಡಿದ್ದಾರೆ. ದನಗಳಲ್ಲದೆ ಸಾಕು ಪ್ರಾಣಿಗಳಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದನ್ನು ಮುಚ್ಚಿಸಿ ಮುಸ್ಲಿಂ ಸಮುದಾಯಕ್ಕೆ ಈ ಜಾಗ ಹಸ್ತಾಂತರ ಮಾಡುವುದಕ್ಕೆ ಬಿಜೆಪಿ ಬಿಡುವುದಿಲ್ಲ ಎಂದೂ ಆರ್‌.ಅಶೋಕ್‌ ಹೇಳಿದ್ದಾರೆ. ಸಿದ್ದರಾಮಯ್ಯನವರೇ ಮುಸ್ಲಿಮರ ಓಲೈಕೆಗೆ ಮಿತಿಯೇ ಇಲ್ಲವೇ ಎಂದೂ ಆರ್‌.ಅಶೋಕ್‌ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ; Vidyabalan; ನಟಿ ವಿದ್ಯಾಬಾಲನ್‌ಗೆ ಕಿರಿಕಿರಿ ಮಾಡಿದ ವ್ಯಕ್ತಿ; ವಿಡಿಯೋ ಇದೆ!

ಆರ್‌.ಅಶೋಕ್‌ ಅವರ `ಎಕ್ಸ್‌ʼ ಪೋಸ್ಟ್‌ನಲ್ಲೇನಿದೆ..?;

ಆರ್‌.ಅಶೋಕ್‌ ಅವರ `ಎಕ್ಸ್‌ʼ ಪೋಸ್ಟ್‌ನಲ್ಲೇನಿದೆ..?;
ಕಾಂಗ್ರೆಸ್ ಸರ್ಕಾರದ ಲ್ಯಾಂಡ್ ಜಿಹಾದ್
ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಬೆಲೆಬಾಳುವ ಪಶುಸಂಗೋಪನೆ ಇಲಾಖೆಯ ಎರಡು ಎಕರೆ ಜಾಗವನ್ನು ಮುಸ್ಲಿಮರಿಗೆ ನೀಡುವ ಹುನ್ನಾರ ಮಾಡುತ್ತಿದ್ದೀರಲ್ಲ ಸಿಎಂ @siddaramaiah
ನವರೇ, ಮುಸ್ಲಿಮರ ಓಲೈಕೆಗೆ ಒಂದು ಇತಿ ಮಿತಿ ಬೇಡವೇ?

ದನ ಕರುಗಳಿಗೆ ಚಿಕಿತ್ಸೆ ನೀಡುವ ಸರ್ಕಾರಿ ಪಶು ಚಿಕಿತ್ಸಾಲಯವನ್ನ ಮುಚ್ಚಿಸಿ ಅದನ್ನ ಮುಸ್ಲಿಂರಿಗೆ ಕೊಡುವ ಅನಿವಾರ್ಯತೆ ಆದರೂ ಏನಿತ್ತು? ಜಾನುವಾರುಗಳಿಗೆ ಮಾತ್ರ ಆ ಚಿಕಿತ್ಸಾಲಯ ಸ್ಥಾಪಿಸಿಲ್ಲ. ಇತರೆ ಸಾಕು ಪ್ರಾಣಿಗಳ ಚಿಕಿತ್ಸೆಗೂ ಸ್ಥಾಪಿಸಲಾಗಿತ್ತು. ನಗರದ ಹೃದಯಭಾಗದಲ್ಲಿರುವ ಐನೂರು ಕೋಟಿಗೂ ಹೆಚ್ಚು ಬೆಲೆ ಬಾಳುವ ಜಾಗವನ್ನು ಹಸ್ತಾಂತರ ಮಾಡಲು ನಾವು ಬಿಡುವುದಿಲ್ಲ.
ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು @INCKarnataka ಸರ್ಕಾರದ ಲ್ಯಾಂಡ್ ಜಿಹಾದ್ ಎಂದು ಕರೆಯಬಹುದೇ?

ಇದನ್ನೂ ಓದಿ; Pushpa-2; ಆ ಒಂದು ಸೀನ್‌ಗಾಗಿ 50 ಕೋಟಿ ಖರ್ಚು ಮಾಡಿದರಾ..?

ಇನ್ನು ಸರ್ಕಾರದಿಂದ ನಡೆದ ತೀರ್ಮಾನಗಳ ದಾಖಲೆಗಳನ್ನು ಕೂಡಾ ಆರ್‌.ಅಶೋಕ್‌ ಲಗತ್ತಿಸಿದ್ದಾರೆ. ಅದರಲ್ಲಿರುವ ಯಥಾವತ್‌ ಮಾಹಿತಿ ಇಲ್ಲಿದೆ;
ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧೀನದಲ್ಲಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಚಲುವಾಧಿಪಾಳ್ಯ ವಾರ್ಡ್, ಮೈಸೂರು ರಸ್ತೆ ಹಾಗೂ ಗೂಡ್‌ ಶೆಡ್ ರಸ್ತೆ ಹೊಂದಿಕೊಂಡಂತೆ ಇರುವ 2-00 ಜಾಗವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ಕುರಿತು.

ಪ್ರಸ್ತಾವನೆ: ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ಏಕಕಡತದಲ್ಲಿ, ಸರ್ಕಾರದ ಕಾರ್ಯದರ್ಶಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು ಇವರು ರಾಜ್ಯದಲ್ಲಿ ಅಲ್ಪಸಂಖ್ಯಾತರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೂಲಕ 126 ವಸತಿ ಶಾಲೆಗಳು, 314 ವಿದ್ಯಾರ್ಥಿ ನಿಲಯಗಳು 200 ಮೌಲಾನಾ ಆಜಾದ್ ಮಾದರಿ ಶಾಲೆಗಳು, 101 ವಸತಿ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ.

ಮಾನ್ಯ ವಸತಿ, ವಕ್ಸ್ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಇವರು ಟಿಪ್ಪಣಿಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚಲುವಾಧಿಪಾಳ್ಯ ವಾರ್ಡ್, ಮೈಸೂರು ರಸ್ತೆ ಹಾಗೂ ಗೂಡ್‌ ಶೆಡ್ ರಸ್ತೆ ಹೊಂದಿಕೊಂಡಂತೆ ಪಶುಸಂಗೋಪನಾ ಇಲಾಖೆಯ ಪಶು ಚಿಕಿತ್ಸಾಲಯವಿದ್ದು, ಬೆಂಗಳೂರು ನಗರ ಪ್ರದೇಶದಲ್ಲಿ ಜಾನುವಾರುಗಳ ಸಾಕಣೆ ಕಡಿಮೆ ಇರುವುದರಿಂದ ಬೆಂಗಳೂರು ಕೇಂದ್ರ ಭಾಗದಲ್ಲಿರುವ ಪಶು ಚಿಕಿತ್ಸಾಲಯವು ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಾಗಿದೆ. ಆದುದ್ದರಿಂದ ಪಶುಚಿಕಿತ್ಸಾಲಯವನ್ನು ಬೆಂಗಳೂರು ಹೊರ ವಲಯಕ್ಕೆ ಸ್ಥಳಾಂತರಿಸಿ. ಸದರಿ ಸ್ಥಳದಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಸೂಚಿಸಿರುತ್ತಾರೆ.

ಮುಂದುವರೆದು, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಒಂದು ಲಕ್ಷದ ಇಪ್ಪತೈದು ಸಾವಿರ ಅಲ್ಪಸಂಖ್ಯಾತರ ಜನಸಂಖ್ಯೆ ಹೊಂದಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ಇಲಾಖೆಯ ಮೌಲಾನಾ ಅಜಾದ್ ಮಾದರಿ ಶಾಲೆ/ಮೊರಾರ್ಜಿ ದೇಸಾಯಿ ವಸತಿ ಶಾಲೆ/ವಿದ್ಯಾರ್ಥಿ ನಿಲಯಗಳು ಇರುವುದಿಲ್ಲ. ಸದರಿ ಪ್ರದೇಶದಲ್ಲಿ ಜೈನ ವಿಶ್ವವಿದ್ಯಾಲಯ, ಬೆಂಗಳೂರು ವೈದ್ಯಕೀಯ ಕಾಲೇಜು ಇನ್ನೂ ಹಲವಾರು ಶೈಕ್ಷಣಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ವಿದ್ಯಾರ್ಥಿ ನಿಲಯಗಳ ಹೆಚ್ಚಿನ ಬೇಡಿಕೆ ಇರುತ್ತದೆ.

ಮತ್ತು ಅಲ್ಪಸಂಖ್ಯಾತರ ಸಮುದಾಯದ ಹೆಚ್ಚಿನ ಜನರು ವಾಸಿಸುತ್ತಿರುವ ಕಾರಣ ಮೌಲಾನಾ ಆಜಾದ್,ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಬೇಡಿಕೆಯು ಹೆಚ್ಚಾಗಿರುತ್ತದೆ. ಆದ್ದರಿಂದಾಗಿ ಮೇಲಿನ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಚಾಮರಾಜಪೇಟೆ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಚಲವಾಧಿಪಾಳ್ಯ ವಾರ್ಡ್, ಮೈಸೂರು ರಸ್ತೆ ಹಾಗೂ ಗೂಡ್‌ಶೆಡ್ ರಸ್ತೆಗೆ ಹೊಂದಿಕೊಂಡಂತೆ ಪಶುಸಂಗೋಪನಾ ಇಲಾಖೆಯ ಪಶುಚಿಕಿತ್ಸಾಲಯಕ್ಕೆ ಸೇರಿದ 2-00 ಎಕರೆ ಜಾಗವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಮಂಜೂರು ಮಾಡಲು ಕೋರಿರುತ್ತಾರೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಚಲುವಾಧಿಪಾಳ್ಯ ವಾರ್ಡ್, ಮೈಸೂರು ರಸ್ತೆ ಹಾಗೂ ಗೂಡ್‌ ಶೆಡ್ ರಸ್ತೆಗೆ ಹೊಂದಿಕೊಂಡಂತೆ ಇರುವ ಪಶು ಆಸ್ಪತ್ರೆಯನ್ನು ಹುದ್ದೆಗಳ ಸಮೇತ ಜಯನಗರ, ಬೆಂಗಳೂರು ಇಲ್ಲಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳಾಂತರಿಸಿ ಆದೇಶಿಸಲಾಗಿದೆ. ಸರ್ಕಾರದ ಆದೇಶದಲ್ಲಿ ಸರ್ಕಾರಿ ಜಮೀನನ್ನು ಒಂದು ಇಲಾಖೆ/ ನಿಗಮ/ ಮಂಡಳಿಯಿಂದ ಇನ್ನೊಂದು ಇಲಾಖೆ/ ನಿಗಮ/ ಮಂಡಳಿಗೆ ಹಸ್ತಾಂತರಿಸಬೇಕಾದ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮದ ಬಗ್ಗೆ ತಿಳಿಸಲಾಗಿರುತ್ತದೆ.

ಇದನ್ನೂ ಓದಿ; Tips for Bad Breath; ಬಾಯಿ ದುರ್ಗಂಧ ಬರ್ತಿದೆಯೇ..?; ಈ ಟಿಪ್ಸ್‌ ಫಾಲೋ ಮಾಡಿ!

ಸರ್ಕಾರದ ಆದೇಶ:
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧೀನದಲ್ಲಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಚಲವಾಧಿಪಾಳ್ಯ ವಾರ್ಡ್, ಮೈಸೂರು ರಸ್ತೆ ಹಾಗೂ ಗೂಡ್‌ಶೆಡ್ ರಸ್ತೆಗೆ ಹೊಂದಿಕೊಂಡಂತೆ ಇರುವ ಪಶುಸಂಗೋಪನಾ ಇಲಾಖೆಯ ಪಶು ಆಸ್ಪತ್ರೆ ಮತ್ತು ನಿವೇಶನವನ್ನು (2-00 ಎಕರೆ) ಮೌಲಾನಾ ಆಜಾದ್/ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನಿರ್ಮಾಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿ ಆದೇಶಿಸಿದೆ. ಸದರಿ ಜಮೀನನ್ನು ನಿಯಮಾನುಸಾರ ಯಾವ ಉದ್ದೇಶಕ್ಕಾಗಿ ಹಸ್ತಾಂತರಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಬಳಸಿಕೊಳ್ಳತಕ್ಕದ್ದು ಎಂದು ಸೂಚಿಸಲಾಗಿದೆ.

Share Post