Dairy Products; ಒಂದು ತಿಂಗಳು ಡೈರಿ ಉತ್ಪನ್ನ ತ್ಯಜಿಸಿ; ದೇಹದ ಬದಲಾವಣೆ ನೋಡಿ
ಬೆಂಗಳೂರು; ನೀವು ಹೆಚ್ಚಾಗಿ ಡೈರಿ ಉತ್ಪನ್ನಗಳ ಮೇಲೆ ಅವಲಂಬಿತರಾಗಿದ್ದೀರಾ? ಪ್ರತಿಯೊಂದು ಆಹಾರದಲ್ಲೂ ಡೈರಿ ಉತ್ಪನ್ನಗಳನ್ನು ಬಳಸುತ್ತಿದ್ದೀರಾ..? ಇದೇ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು. ನಿಮ್ಮ ದೇಹದ ತೂಕ ಹೆಚ್ಚಾಗಲು ಕೂಡಾ ಇದೇ ಕಾರಣವಾಗಿರಬಹುದು. ಹಾಗಾದ್ರೆ, ಒಂದು ತಿಂಗಳು ಡೈರಿ ಉತ್ಪನ್ನಗಳನ್ನು ಸಂಪೂರ್ಣವಾಗಿ ತ್ಯಜಿಸಿಬಿಡಿ.. ಆಗ ನಿಮ್ಮ ದೇಹದಲ್ಲಾಗುವ ಬದಲಾವಣೆ ನೋಡಿ.
ದೇಹದ ಯೋಗ ಕ್ಷೇಮಕ್ಕಾಗಿ ಡೈರಿ ಉತ್ಪನ್ನ ತ್ಯಜಿಸಿ;
ಸ್ಥೂಲಕಾಯ ಹೊಂದಿರುವವರು, ಮಧುಮೇಹಿಗಳು ಆದಷ್ಟು ಡೈರಿ ಉತ್ಪನ್ನಗಳಿಂದ ದೂರ ಇರಬೇಕು. ಆಗಾಗ ಒಂದೊಂದು ತಿಂಗಳು ಸಂಪೂರ್ಣವಾಗಿ ಡೈರಿ ಉತ್ಪನ್ನ ತ್ಯಜಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತಾರೆ ತಜ್ಞರು.
ಮೂರು ವಾರದಲ್ಲೇ ಫಲಿತಾಂಶ;
ಡೈರಿ ಉತ್ಪನ್ನಗಳು ತ್ಯಜಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಡೈರಿ ಉತ್ಪನ್ನಗಳ ಸೇವನೆಯಿಂದ ದೇಹ ಸೇರುತ್ತಿದ್ದ ಹೆಚ್ಚುವರಿ ಸ್ಯಾಚುರೇಟೆಡ್ ಕೊಬ್ಬಿನಾಂಶ, ಸಕ್ಕರೆ, ಉಪ್ಪಿನಂಶ ಕಡಿಮೆಯಾಗುತ್ತದೆ. ಇದ್ರಿಂದ ಹೃದ್ರೋಗಿಗಳು, ಮಧುಮೇಹಿಗಳಿಗೆ ಸಾಕಷ್ಟು ಆರೋಗ್ಯದ ಪ್ರಯೋಜನಗಳು ಸಿಗಲಿವೆ. ಡೈರಿ ಉತ್ಪನ್ನಗಳನ್ನು ತ್ಯಜಿಸಿದ ಮೂರು ವಾರಗಳಲ್ಲೇ ಫಲಿತಾಂಶ ಸಿಗಲಿದೆ. ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತಾ ಹೋಗುತ್ತೀರಿ.
ಡೈರಿ ಉತ್ಪನ್ನಗಳಲ್ಲಿ ಹೆಚ್ಚಿನ ಕ್ಯಾಲೊರಿ, ಕೊಬ್ಬಿನಾಂಶ;
ಡೈರಿ ಉತ್ಪನ್ನಗಳಲ್ಲಿ ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬಿನಾಂಶ ಹೆಚ್ಚಿರುತ್ತದೆ. ಇವುಗಳನ್ನು ಹೆಚ್ಚು ಸೇವಿಸುವುದರಿಂದ ಹೃದ್ರೋಗ ಹಾಗೂ ಮಧುಮೇಹಿಗಳಿಗೆ ಸಂಕಷ್ಟ ತಂದೊಡ್ಡುತ್ತದೆ. ಇದರಿಂದಾಗಿ ಆದಷ್ಟು ಡೈರಿ ಉತ್ಪನ್ನಗಳನ್ನು ದೂರವಿಡುವುದು ಒಳ್ಳೆಯದು. ಯಾವಾಗ ನಾವು ಡೈರಿ ಉತ್ಪನ್ನಗಳನ್ನು ತ್ಯಜಿಸುತ್ತೇವೆಯೋ ಆಗ ದೇಹದ ಆರೋಗ್ಯ ಸುಧಾರಿಸುತ್ತದೆ. ಸ್ಥೂಕಕಾಯ ಸಮಸ್ಯೆ ಕಡಿಮೆಯಾಗುತ್ತದೆ. ದೇಹದ ತೂಕ ಕೂಡಾ ಕಡಿಮೆಯಾಗುತ್ತದೆ.
ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ;
ಡೈರಿ ಉತ್ಪನ್ನಗಳು ಬಹುಬೇಗ ಜೀರ್ಣವಾಗುವುದಿಲ್ಲ. ಹೀಗಾಗಿ ಡೈರಿ ಉತ್ಪನ್ನಗಳು ತ್ಯಜಿಸಿದ ಬಳಿಕ ಅನೇಕರಿಗೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಲ್ಯಾಕ್ಟೋಸ್ ಎಂಬ ಹಾಲಿನಲ್ಲಿ ಕಂಡು ಬರುವ ಸಕ್ಕರೆಯ ಅಂಶದಿಂದ ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಡೈರಿ ಉತ್ಪನ್ನಗಳನ್ನು ತ್ಯಜಿಸಿದ ಬಳಿಕ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತಾ ಹೋಗುತ್ತದೆ. ಅತಿಸಾರ, ಅಜೀರ್ಣದಂತಹ ಸಮಸ್ಯೆಗಳು ಕಾಣಿಸುವುದಿಲ್ಲ.
ಚರ್ಮದ ಆರೋಗ್ಯ ಕೂಡಾ ಸುಧಾರಿಸುತ್ತೆ;
ಡೈರಿ ಉತ್ಪನ್ನಗಳನ್ನು ತ್ಯಜಿಸಿದ ಒಂದು ತಿಂಗಳಲ್ಲೇ ಚರ್ಮದ ಆರೋಗ್ಯ ಹಾಗೂ ಚರ್ಮಕ್ಕೆ ವಯಸ್ಸಾಗುವ ಪ್ರಕ್ರಿಯೆ ಕಡಿಮೆಯಾಗುತ್ತದೆ. ಡೈರಿ ಉತ್ಪನ್ನಗಳ ಸೇವನೆಯಿಂದ ಮುಖದ ಮೇಲೆ ಮೊಡವೆಗಳು ಬರುತ್ತವೆ. ಆದ್ರೆ ಡೈರಿ ಉತ್ಪನ್ನ ತ್ಯಜಿಸಿದರೆ, ಸಮಸ್ಯೆಗೆ ಪರಿಹಾರ ಸಿಗಲಿದೆ. ತ್ವಚೆ ಕಾಂತಿ ಹೆಚ್ಚಾಗುತ್ತದೆ.
ಆದರೂ ಡೈರಿ ಉತ್ಪನ್ನಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾದ ಉತ್ತಮ ಪೋಷಕಾಂಶಗಳು ಇವೆ. ಹೀಗಾಗಿ ಡೈರಿ ಉತ್ಪನ್ನಗಳನ್ನು ತ್ಯಜಿಸಿದ ಬಳಿಕ ಸಮತೋಲಿತ ಆಹಾರವನ್ನು ಸೇವನೆ ಮಾಡುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.