Bus Accident; ನೇರ ಮನೆಗೆ ನುಗ್ಗಿಬಿಡ್ತು ಸರ್ಕಾರಿ ಬಸ್; ಹೀಗಾದ್ರೆ ಕತೆ ಏನು..?
ಹಾಸನ; ಸರ್ಕಾರಿ ಬಸ್ ಅವಾಂತರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಬಸ್‌ಗಳೇ ಸರಿಯಿಲ್ಲವೋ, ಓಡಿಸೋ ರೀತಿ ಸರಿಯಿಲ್ಲವೋ ಅಥವಾ ಜನ ಗ್ರಹಚಾರವೇ ನೆಟ್ಟಗಿಲ್ಲವೋ ಗೊತ್ತಿಲ್ಲ. ಆದ್ರೆ, ನಿತ್ಯ ಅಪಘಾತಕ್ಕೆ ಜನ ಬಲಿಯಾಗತ್ತಲೇ ಇದ್ದಾರೆ. ಇವತ್ತೊಂದು ಸರ್ಕಾರಿ ಬಸ್ ನೇರವಾಗಿ ಮನೆಯೊಳಗೇ ನುಗ್ಗು ಅವಾಂತರ ಸೃಷ್ಟಿ ಮಾಡಿದೆ.
ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಕೆಎಸ್‌ಆರ್‌ಟಿಸಿ ಬಸ್ ಒಂದು ಮೊದಲು ಸರ್ಕಾರಿ ಶಾಲೆಗೆ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಅನಂತರ ಮನೆಯೊಂದಕ್ಕೆ ನುಗ್ಗಿಬಿಟ್ಟಿದೆ. ಘಟನೆಯಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.
ಆಕ್ಸಲ್ ಕಟ್ ಆಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್
ಮೂವತ್ಕಾಲ್ಕು ವರ್ಷದ ಅಮೃತ್ ರಾಜ್ ಎಂಬಾತ ಸಾವನ್ನಪ್ಪಿರುವ ದುರ್ದೈವಿ. ಅಮೃತ್‌ರಾಜ್ ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಗ್ರಾಮದ ನಿವಾಸಿಯಾಗಿದ್ದಾನೆ. ಸರ್ಕಾರಿ ಬಸ್ ಬೆಂಗಳೂರಿಗೆ ಧರ್ಮಸ್ಥಳಕ್ಕೆ ಹೋಗುತ್ತಿತ್ತು. ಬಾಗೇ ಗ್ರಾಮದ ಬಳಿ ಬಂದಾಗ ಅದರ ಆಕ್ಸಲ್ ಕಟ್ ಆಗಿದ್ದು ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡಿದೆ.
ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸಕಲೇಶಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮನೆ ಭಾಗಶಃ ಧ್ವಂಸ
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮನೆ ಭಾಗಶಃ ಧ್ವಂಸವಾಗಿದೆ. ಆದರೂ ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.