ಮಹಾರಾಷ್ಟ್ರ ಸಿಎಂ ಶಿಂಧೆ ಬಣದ ಮುಖಂಡನ ಮೇಲೆ ಗುಂಡಿನ ದಾಳಿ!
ಥಾಣೆ; ಮಹಾರಾಷ್ಟ್ರದಲ್ಲಿ ರಾಜಕೀಯ ದ್ವೇಷಕ್ಕೆ ಗುಂಡಿನ ದಾಳಿ ನಡೆದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ಬಣದ ಮುಖಂಡ ಮಹೇಶ್ ಗಾಯಕ್ವಾಡ್ ಮೇಲೆ ಥಾಣೆಯ ಉಲ್ಲಾಸ್ ನಗರದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದಾರೆ. ಗುಂಡಿನ ದಾಳಿ ನಡೆಸಿದ ನಂತರ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮಹೇಶ್ ಗಾಯಕ್ವಾಡ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಏಕನಾಥ್ ಶಿಂಧೆ ಬಣದ ನಾಯಕ ಮಹೇಶ್ ಗಾಯಕ್ವಾಡ್ ಹಾಗೂ ಅವರ ಬೆಂಬಲಿಗರ ಮೇಲೆ ದುಷ್ಕರ್ಮಿಗಳು ಕಳೆದ ರಾತ್ರಿ ಏಕಾಏಕಿ ಗುಂಡಿ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಇದರಲ್ಲಿ ಮಹೇಶ್ ಗಾಯಕ್ವಾಡ್ ಹಾಗೂ ಮತ್ತೊಬ್ಬ ಗಾಯಗೊಂಡಿದ್ದಾನೆ. ಇಬ್ಬರಿಗೂ ಐದು ಗುಂಡು ತಗುಲಿವೆ ಎಂದು ಹೇಳಲಾಗುತ್ತಿದೆ.
ಮಾಹಿತಿ ಪ್ರಕಾರ ಮಹೇಶ್ ಗಾಯಕ್ವಾಡ್ ಹಾಗೂ ಸ್ಥಳೀಯ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ನಡುವೆ ಜಮೀನು ವಿವಾದವಿತ್ತು. ಈ ಸಂಬಂಧ ಹಲವು ದಿನಗಳಿಂದ ಜಗಳಗಳು ನಡೆಯುತ್ತಿತ್ತು. ಈ ಹಿನ್ನೆಯಲ್ಲಿ ಎರಡೂ ಕಡೆಯವರು ಶುಕ್ರವಾರ ತಡರಾತ್ರಿ ಉಲ್ಲಾಸ್ ನಗರದ ಹಿಲ್‌ಲೈನ್ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಬಂದಿದ್ದರು. ಈ ವೇಳೆ ಪೊಲೀಸ್ ಠಾಣೆ ಆವರಣದಲ್ಲೇ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಶಾಸಕ ಗಣಪತ್ ಗಾಯಕ್ವಾಡ್ ಬೆಂಬಲಿಗರು ಗುಂಡಿ ಹಾರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.