ಅಗರ ಗ್ರಾಮದಲ್ಲಿ ಸುಸಜ್ಜಿತ ಬಿಎಂಎಸ್ ಆಸ್ಪತ್ರೆ ಉದ್ಘಾಟನೆ
ಬೆಂಗಳೂರು; ಗ್ರಾಮೀಣ ಭಾಗದ ಜನರಿಗೆ ಸುಸಜ್ಜಿತ ಆರೋಗ್ಯ ಸೇವೆ ಸಿಗೋದು ದೂರದ ಮಾತು. ಹಳ್ಳಿ ಜನ ತೀವ್ರ ಅನಾರೋಗ್ಯಕ್ಕೀಡಾದರೆ ನಗರಕ್ಕೇ ಬರಬೇಕು. ಅಷ್ಟರಲ್ಲಿ ಜೀವ ಉಳಿದಿದ್ದರೆ ಅದೃಷ್ಟ ಅಷ್ಟೇ. ಗ್ರಾಮೀಣ ಜನರ ಇಂತಹ ನಿತ್ಯದ ಪಡಿಪಾಟಲು ಗಮನಿಸಿದ ಬಿಎಂಎಸ್ ಟ್ರಸ್ಟ್ ಆಸ್ಪತ್ರೆ ಗ್ರಾಮೀಣ ಭಾಗದಲ್ಲೊಂದು ಸುಸಜ್ಜಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಆಸ್ಪತ್ರೆಯನ್ನು ಅಗರ ಗ್ರಾಮದ ಮಾತೃಛಾಯಾ ಟ್ರಸ್ಟ್ ಆವರಣದಲ್ಲಿ ಲೋಕಾರ್ಪಣೆ ಮಾಡಿದೆ.
ಬೆಂಗಳೂರು ಹೊರವಲಯದಲ್ಲಿ ಬರುವ ತಾತಗುಣಿ ಪೋಸ್ಟ್ ಅಗರ ಗ್ರಾಮದಲ್ಲಿ ಬಿಎಂಎಸ್ ಟ್ರಸ್ಟ್ ಆಸ್ಪತ್ರೆಯ ಎರಡನೇ ಶಾಖೆ ಉದ್ಘಾಟನೆ ಶನಿವಾರ ನೆರವೇರಿತು. 29 ಬೆಡ್ ಗಳ ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವ್ಯವಸ್ಥೆ ಜೊತಗೆ ತಜ್ಞ ವೈದ್ಯರ ತಂಡ ಕೂಡಾ ಇಲ್ಲಿ ಕೆಲಸ ಮಾಡುತ್ತಿದೆ. ಬಡ ಜನರಿಗೆ ಅತಿಕಡಿಮೆ ದರದಲ್ಲಿ ಉತ್ಕೃಷ್ಟ ಆರೋಗ್ಯ ಸೇವೆ ಒದಗಿಸಲೆಂದೇ ಈ ಆಸ್ಪತ್ರೆ ಪ್ರಾರಂಭಿಸಲಾಗಿದೆ. ಸುತ್ತಮುತ್ತಲ ಹಳ್ಳಿಗಳ ಜನರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು.
ಬಿಎಂಎಸ್ ಟ್ರಸ್ಟ್ ಆಸ್ಪತ್ರೆಯ ಲೈಫ್ ಟ್ರಸ್ಟಿ ಡಾ. ಬಿ.ಎಸ್. ರಾಗಿಣಿ ನಾರಾಯಣ, ಡಾ. ದಯಾನಂದ ಪೈ .ಪಿ , ಹಾಗೂ ಇತರೆ ಟ್ರಸ್ಟಿಗಳ ನೇತೃತ್ವದಲ್ಲಿ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಟ್ರಸ್ಟಿಗಳಾದ ಛೇರ್ಮನ್ ಶ್ರೀ ಗೌತಮ್ ವಿ. ಕಲತ್ತೂರ್, ಅವಿರಾಮ್ ಶರ್ಮಾ, ವೈದ್ಯಕೀಯ ನಿರ್ದೇಶಕರಾದ ಡಾ.ಕುಮಾರಸ್ವಾಮಿ ಕೆ.ಇ ಹಾಗು ಮಾತೃಛಾಯಾ ಟ್ರಸ್ಟ್ ನ ವಿ. ಕೃಷ್ಣಮೂರ್ತಿ ಮತ್ತು ಶ್ರೀ ಕೌಶಿಕ್ ಕೃಷ್ಣಮೂರ್ತಿ, ಡಾ ಪ್ರಿಯಾಂಕಾ ಎಂ ಡಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.