ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ ವಿಚಾರ; ಎಐಸಿಸಿ ಅಧ್ಯಕ್ಷ ಖರ್ಗೆ ಹೀಗೆ ಹೇಳಿದ್ಯಾಕೆ..?
ಕಲಬುರಗಿ; ರಾಜ್ಯದಲ್ಲಿ ಇನ್ನೂ ಮೂರು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಕೆಲ ಸಚಿವರು ಒತ್ತಡ ಹೇರುತ್ತಿದ್ದಾರೆ. ಆದ್ರೆ ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸ್ಪಷ್ಟನೆ ಕೊಟ್ಟಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿರುವ ಅವರು, ಮೂವರು ಡಿಸಿಎಂ ಹುದ್ದೆಗಳ ಸೃಷ್ಟಿ ವಿಚಾರ ಹೈಕಮಾಂಡ್ ಮುಂದೆ ಇಲ್ಲ. ಈ ಬಗ್ಗೆ ಮಾಹಿತಿ ಬೇಕಿದ್ದರೆ ನೀವು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಿ ಎಂದು ಹೇಳಿದ್ದಾರೆ.
ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಆ ವಿಚಾರ ನಮ್ಮ ಮುಂದೆ ಇಲ್ಲವೇ ಇಲ್ಲ. ಎಲ್ಲವೂ ಊಹಾಪೋಹ ಅಷ್ಟೇ. ಚುನಾವಣೆ ಸಮಯದಲ್ಲಿ ಇಂತಹ ವಿಚಾರಗಳ ಚರ್ಚೆಗೆ ಬರಲೇಬಾರದು ಎಂದು ಖರ್ಗೆ ಇದೇ ವೇಳೆ ಹೇಳಿದ್ದಾರೆ. ನಾವು ಮೊದಲು ನಮ್ಮ ಗುರಿ ಮುಟ್ಟುವ ಕಡೆ ಗಮನ ಕೊಡಬೇಕು. ಅಲ್ಲಿಯ ತನಕ ಇಂತಹದ್ದಕ್ಕೆಲ್ಲಾ ಅವಕಾಶ ಕೊಡಬಾರದು, ಸರ್ಕಾರ ನಡೆಸುವುದರ ಕಡೆ, ಗ್ಯಾರೆಂಟಿಗಳ ಅನುಷ್ಠಾನದ ಕಡೆ ಗಮನ ಕೊಡುವುದು ಒಳ್ಳೆಯದು ಎನ್ನುವುದರ ಮೂಲಕ ಮಲ್ಲಿಕಾರ್ಜುನ ಖರ್ಗೆ ಪರೋಕ್ಷವಾಗಿ ಸಚಿವರಿಗೆ ಕಿವಿಮಾತು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳ ಆಯ್ಕೆಗೆ ವಿಚಾರವಾಗಿ ನಾಳೆ ಸಭೆ ನಡೆಯಲಿದೆ. ಯಾರನ್ನು ಕಣಕ್ಕಿಳಿಸಬೇಕು ಎಂದು ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಇಂಡಿಯಾ ಒಕ್ಕೂಟ ಒಟ್ಟಾಗಿ ಹೋಗುವ ನಿರ್ಣಯ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.