ಟಿಪ್ಪುನಂತೆ ಹಿಂದೂ-ಮುಸ್ಲಿಮರನ್ನು ಒಡೆಯುತ್ತಿರುವ ಸಿದ್ದರಾಮಯ್ಯ; ಆರ್.ಅಶೋಕ್
ಬೆಂಗಳೂರು; ಅಲ್ಪಸಂಖ್ಯಾತರ ಬಡಾವಣೆಗಳ ಸುಧಾರಣೆಗೆ 11 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಪ್ಪು ಸುಲ್ತಾನ ಮಾಡಿದಂತೆಯೇ ಹಿಂದೂ-ಮುಸ್ಲಿಮರನ್ನು ಬೇರೆ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ಹೊರಹಾಕಿದ್ದಾರೆ.
ಅವರು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಒಂದೇ ವಾರದಲ್ಲಿ ಪ್ರತಿ ರೈತರಿಗೆ 2 ಸಾವಿರ ರೂ. ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ವಾಸ್ತವವಾಗಿ ಪ್ರತಿಯೊಬ್ಬರಿಗೆ 30-40 ಸಾವಿರ ರೂ. ಕೊಡಬೇಕಿತ್ತು. ಇವರಿಗೆ ಅಷ್ಟು ಹಣ ನೀಡಲು ಕೂಡ ಯೋಗ್ಯತೆ ಇಲ್ಲ. ಬೆಳಗಾವಿ ಅಧಿವೇಶನದಲ್ಲಿ ವಿರೋಧ ಬರುತ್ತದೆಂದು 2 ಸಾವಿರ ರೂ. ಘೋಷಿಸಿದ್ದರು. ಅದನ್ನು ಕೊಡುವ ಯೋಗ್ಯತೆ ಇಲ್ಲದವರು ಮಾನ ಮರ್ಯಾದೆ ಇಲ್ಲದೆ 11 ಸಾವಿರ ಕೋಟಿ ರೂಪಾಯಿಯನ್ನು ಅಲ್ಪಸಂಖ್ಯಾತರ ಬಡಾವಣೆಗೆ ಖರ್ಚು ಮಾಡುತ್ತೇನೆ ಎಂದು ಹೇಳುತ್ತಾರೆ ಎಂದು ದೂರಿದರು.
ಹಿಂದೆ ಟಿಪ್ಪು ಸುಲ್ತಾನ ಹಿಂದೂ ಮುಸ್ಲಿಮರನ್ನು ಬೇರೆ ಮಾಡಿದಂತೆ ಸಿಎಂ ಸಿದ್ದರಾಮಯ್ಯನವರು ಈಗ ಮಾಡುತ್ತಿದ್ದಾರೆ. ಮುಸ್ಲಿಮರ ಕಾಲೋನಿ ಬೇರೆ, ಹಿಂದೂಗಳ ಪ್ರದೇಶ ಬೇರೆ ಎಂದು ವರ್ಗೀಕರಣ ಮಾಡಿ ಸಂವಿಧಾನಕ್ಕೆ ಅಪಚಾರವಸೆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ ಕಾಣಿಕೆ ನೀಡುತ್ತಿದ್ದರೆ, ಬರಗಾಲದಿಂದ ನೊಂದ ರೈತರಿಗೆ ನೇಣಿನ ಕುಣಿಕೆ ನೀಡಿದೆ. ಸಾಲ ತೀರಿಸಲಾಗದೆ ಕಳೆದ ಏಳು ತಿಂಗಳಲ್ಲಿ 500 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟಿದ್ದರೂ ಅಲ್ಪಸಂಖ್ಯಾತರಿಗೆ ಬಂಪರ್ ಮೇಲೆ ಬಂಪರ್ ಕಾಣಿಕೆ ನೀಡುತ್ತಿದ್ದಾರೆ. ಈ ಹಿಂದೆ 10 ಸಾವಿರ ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದ್ದರು. ಈಗ 1 ಸಾವಿರ ಕೋಟಿ ರೂ. ಸೇರಿ 11 ಸಾವಿರ ಕೋಟಿ ರೂಪಾಯಿ ಆಗಿದೆ ಎಂದರು.