NationalPolitics

ಕಾಂಗ್ರೆಸ್‌ ಸರ್ಕಾರ ಬೀಳಿಸೋ ಆಟದಲ್ಲಿ ನಾವಿಲ್ಲ; ಹೆಚ್ಡಿಕೆಗೆ ವ್ಯತಿರಿಕ್ತ ಹೇಳಿಕೆ ಕೊಟ್ಟ ಪ್ರಹ್ಲಾದ್‌ ಜೋಶಿ

ನವದೆಹಲಿ; ಜೆಡಿಎಸ್‌ ಪಕ್ಷ ಎನ್‌ಡಿಎ ಮೈತ್ರಿಕೂಟದ ಒಂದು ಭಾಗ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಈ ಪಕ್ಷದ ನಾಯಕ ಕುಮಾರಸ್ವಾಮಿ ಇತ್ತೀಚೆಗೆ ಒಂದು ಹೇಳಿಕೆ ಕೊಟ್ಟಿದ್ದರು. ರಾಜ್ಯ ಕಾಂಗ್ರೆಸ್‌ ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ. ಮುಂದಿನ ವರ್ಷದ ಮೇ ತಿಂಗಳ ಒಳಗೆ ಸರ್ಕಾರ ಪತನವಾಗುತ್ತೆ ಎಂದು ಭವಿಷ್ಯ ನುಡಿದಿದ್ದರು. ಆದ್ರೆ, ಅವರದೇ ಮಿತ್ರಪಕ್ಷ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವ್ಯತಿರಿಕ್ತ ಹೇಳಿಕೆ ಕೊಟ್ಟಿದ್ದಾರೆ.

ಕರ್ನಾಟದಲ್ಲಿ ಜನರು ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಕೊಟ್ಟಿದ್ಧಾರೆ. ಐದು ವರ್ಷ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಾರೆ. ಹೀಗಾಗಿ, ನಾವು ಆ ಸರ್ಕಾರವನ್ನು ಬೀಳಿಸಲು ಹೋಗೋದಿಲ್ಲ. ಈಗಿರುವ ಸರ್ಕಾರವನ್ನು ಬೀಳಿಸಿ ನಾವು ಸರ್ಕಾರ ರಚಿಸುವ ಯೋಚನೆ ಕೂಡಾ ನಮಗಿಲ್ಲ. ಕುಮಾರಸ್ವಾಮಿ ಸೇರಿ ಕೆಲವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದ್ರೆ ನಾನು ನಮ್ಮ ಪಕ್ಷದ ನಾಯಕರಿಗೆ ಮನವಿ ಮಾಡಿಕೊಳ್ಳುತ್ತೇನೆ. ಯಾರೂ ಕೂಡಾ ಇಂತಹ ಹೇಳಿಕೆಗಳನ್ನು ನೀಡಬೇಡಿ. ನಾವು ಸರ್ಕಾರ ಚೆನ್ನಾಗಿ ನಡೆಯಲಿ, ಬಡವರ ಪರ, ಅಭಿವೃದ್ಧಿ ಕೆಲಸ ಮಾಡಲಿ ಎಂದಷ್ಟೇ ನಾವು ಬಯಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಹೇಳಿದ್ದಾರೆ.

ITV Networkನ ಭಾಗವಾಗಿರುವ INDIA  NEWS ವತಿಯಿಂದ ದೆಹಲಿಯ ಎನ್‌ಡಿಎಂಸಿ ಕನ್ವೆನ್ಷನ್‌ ಸೆಂಟರ್‌ನಲ್ಲಿ ಇಂಡಿಯಾ ನ್ಯೂಸ್‌ ಮಂಚ್‌ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಹ್ಲಾದ್‌ ಜೋಷಿಯವರಿಗೆ, ನಿಮ್ಮ ಮಿತ್ರಪಕ್ಷವಾಗಿರುವ ಜೆಡಿಎಸ್‌ ಪಕ್ಷದ ನಾಯಕ ಕುಮಾರಸ್ವಾಮಿ, ಕರ್ನಾಟಕ ಸರ್ಕಾರ ಮೇ ತಿಂಗಳೊಳಗೆ ಪತನವಾಗಲಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪ್ರಹ್ಲಾದ್‌ ಜೋಶಿ, ಈ ಆಟದಲ್ಲಿ ನಾವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಈ ಮೂಲಕ ಕುಮಾರಸ್ವಾಮಿ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದರು.

ಮುಂದವರೆದು ಮಾತನಾಡಿದ ಅವರು, ಸರ್ಕಾರವನ್ನು ಬೀಳಿಸೋದರಲ್ಲಾಗಲೂ, ಸರ್ಕಾರ ರಚನೆ ಮಾಡೋದ್ರಲ್ಲಾಗಲೀ ನಾವಿಲ್ಲ. ಆದ್ರೆ ಅವರಿಗೆ ಅಧಿಕಾರವನ್ನು ಜನ ಕೊಟ್ಟಿದ್ದಾರೆ. ಅದನ್ನು ಸರಿಯಾಗಿ ನಿರ್ವಹಿಸಲಿ ಎಂದಷ್ಟೇ ನನ್ನ ಸಲಹೆ. ಆದ್ರೆ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಮಾಡುತ್ತಿರುವುದು ಬರೀ ನಾನ್ಸೆನ್ಸ್‌. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಉಚಿತ ಸ್ಕೀಂಗಳನ್ನು ಜಾರಿಗೆ ತಂದಿದ್ದಾರಾದರೂ, ಅವು ವ್ಯವಸ್ಥಿತವಾಗಿ ಜನರಿಗೆ ಮುಟ್ಟುತ್ತಿಲ್ಲ. ಇನ್ನು ಉಚಿತಗಳ ಹೆಸರಿನಲ್ಲಿ ರಾಜ್ಯದ ಅಭಿವೃದ್ಧಿಗೆ ಬ್ರೇಕ್‌ ಹಾಕಿದ್ದಾರೆ ಎಂದು ಪ್ರಹ್ಲಾದ್‌ ಜೋಶಿ ಆಕ್ರೋಶ ಹೊರಹಾಕಿದರು.

ಇನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಾರ್ವಜನಿಕವಾಗಿಯೇ ಹೇಳಿದ್ದಾರೆ. ಉಚಿತಗಳಿಗೆ ಹಣವೆಲ್ಲಾ ಖರ್ಚಾಗುತ್ತಿದೆ. ಹೀಗಾಗಿ, ಇತರೆ ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲ ಎಂದು ಹೇಳಿದ್ದಾರೆ. ಅನುದಾನ ಕೇಳಿಕೊಂಡು ನಮ್ಮ ಬಳಿ ಬರಬೇಡಿ ಎಂದು ಶಾಸಕರಿಗೂ ಹೇಳಿಬಿಟ್ಟಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಕರ್ನಾಟಕ ಸರ್ಕಾರ ಇದೆ ಎಂದು ಪ್ರಹ್ಲಾದ್‌ ಜೋಶಿ ಆಕ್ರೋಶ ಹೊರಹಾಕಿದ್ದಾರೆ.

Share Post