ಕೊನೆಗೂ ಹರಿಯಿತು ಎತ್ತಿನಹೊಳೆ ನೀರು; ಪೈಲ್ ಲೀಕ್ ಆಗಿ ರಸ್ತೆಗೂ ಹರಿಯಿತು!
ಹಾಸನ; ಎತ್ತಿನ ಹೊಳೆ ಹೆಸರಲ್ಲಿ ಹಲವು ಚುನಾವಣೆಗಳು ನಡೆದವು. ಪ್ರತಿ ಚುನಾವಣೆ ಬಂದಾಗಲೂ ಒಂದು ವರ್ಷದಲ್ಲಿ ಎತ್ತಿನಹೊಳೆ ನೀರು ಬರಲಿದೆ ಎಂಬ ಆಶ್ವಾಸನೆ ಸಿಕ್ಕುತ್ತಿತ್ತು. ಆದ್ರೆ ನೀರು ಮಾತ್ರ ಇನ್ನೂ ಬರಲಿಲ್ಲ. ಆದ್ರೆ ಇದೀಗ ಪ್ರಾಯೋಗಿಕ ಎಂಬಂತೆ ನೀರು ಹರಿಸಿದ್ದಾರೆ. ಆದ್ರೆ ನೀರು ಹರಿದ ರಭಸಕ್ಕೆ ಅಲ್ಲಲ್ಲಿ ಪೈಪ್‌ಗಳಿಂದ ನೀರು ಸೋರಿಕೆಯಾಗಿದೆ. ಜೊತೆಗೆ ಭುಮಿ ಕಂಪಿಸಿದ ಅನುಭವವಾಗಿದೆ.
ಹಾಸನ ಜಿಲ್ಲೆಯ ಬಹುತೇಕ ಕಡೆ ಎತ್ತಿನಹೊಳೆ ಯೋಜನೆಯ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಹೀಗಾಗಿ ಇಂದು ಸಕಲೇಶಪುರ ತಾಲೂಕಿನ ಕಾಡುಮನೆಯ ಬಳಿಯ ಚೆಕ್‍ಡ್ಯಾಂನಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಈ ವೇಳೆ ಅಲ್ಲಲ್ಲಿ ಪೈಪ್ ಸೋರಿಕೆಯಾಗಿ ಸಾಕಷ್ಟು ನೀರು ಹರಿದಿದೆ. ಇದರಿಂದಾಗಿ ಹಲವು ಪ್ರದೇಶದಲ್ಲಿ ಬೆಳೆ ಸೇರಿದಂತೆ ಹಲವು ರೀತಿಯ ಹಾನಿ ಸಂಭವಿಸಿದೆ.
ಭೂಮಿಯೊಳಗೆ ಬೃಹತ್ ಗಾತ್ರದ ಪೈಪ್ ಜೋಡಣೆ ಮಾಡಲಾಗಿದೆ. ಈ ಪೈಲ್ ಮೂಲಕ ನೀರು ಹರಿದ ರಭಸಕ್ಕೆ ಹಲವೆಡೆ ಭೂಮಿ ಕಂಪಿಸಿದ ರೀತಿ ಅನುಭವವಾಗಿದೆ. ಇದರಿಂದ ಕೆಲವು ಕಡೆ ಜನರು ಆತಂಕಗೊಂಡಿದ್ದಾರೆ.
ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆ ಮತ್ತು ಹೊಂಗಡಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ 6,657 ಗ್ರಾಮಗಳ 75.59 ಲಕ್ಷ ಜನ-ಜಾನುವಾರುಗಳಿಗೆ 13.931 ಟಿಎಂಸಿ ಕುಡಿಯುವ ನೀರು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ