60ಕ್ಕೂ ಹೆಚ್ಚು ಬಾರಿ ಇರಿದು ಯುವಕನ ಕೊಲೆ; ಶವದ ಮೇಲೆ ಕುಣಿದು ವಿಕೃತಿ ಮೆರೆದ ಹಂತಕ!
ನವದೆಹಲಿ; ಕ್ಷುಲ್ಲಕ ಕಾರಣಕ್ಕಾಗಿ 18 ವರ್ಷದ ಯುವಕನನ್ನು 60 ಬಾರಿ ಇರಿದು ಕೊಂದಿರುವ 16 ವರ್ಷದ ಹುಡುಗ, ಶವದ ಮೇಲೆ ಡ್ಯಾನ್ಸ್ ಮಾಡಿ ವಿಕೃತಿ ಮೆರೆದಿದ್ದಾನೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂತಹದ್ದೊಂದು ಅಮಾನವೀಯ ಘಟನೆ ನಡೆದಿದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಹರಿದಾಡುತ್ತಿವೆ.
ಕೇವಲ 350 ರೂಪಾಯಿ ಹಣಕ್ಕಾಗಿ ಈಶಾನ್ಯ ದೆಹಲಿಯ ಪ್ರದೇಶದ ಕಾಲೊನಿಯೊಂದರಲ್ಲಿ ಈ ಕೊಲೆ ನಡೆದಿದೆ. ಕಳ್ಳತನ ಮಾಡಲೆಂದು ಈ ಪ್ರದೇಶಕ್ಕೆ ಬಂದಿದ್ದ 16ರ ಹುಡುಗ, ಎದುರು ಸಿಕ್ಕ 18 ವರ್ಷದ ಯುವಕನನ್ನು ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸಿದ್ದಾನೆ. ಅನಂತರ ಚಾಕುವಿನಿಂದ 60 ಬಾರಿ ಇರಿದು ಕೊಂದಿದ್ದಾನೆ. ಜಂತಾ ಮಜ್ದೂರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಕೊಲೆಗಡುಕ ಶವದ ಮೇಲೆ ನೃತ್ಯ ಮಾಡಿದ್ದಾನೆ. ಅನಂತರ ಕೊಲೆಯಾದ ಯುವಕನ ಜೇಬಿನಲ್ಲಿದ್ದ 350 ರೂಪಾಯಿ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಕಳ್ಳತನಕ್ಕೆ ಬಂದಿದ್ದು, ಈ ವೇಳೆ ಯುವಕನನ್ನು ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಕೊಲೆಯಾದ ವ್ಯಕ್ತಿಯ ಜೇಬಿನಲ್ಲಿ 350 ರೂಪಾಯಿ ಕದ್ದಿದ್ದಾಗಿಯೂ ಹೇಳಿಕೊಂಡಿದ್ದಾನೆ. ಇದುವರೆಗೂ ಸಂತ್ರಸ್ತನ ಗುರುತು ಪತ್ತೆಯಾಗಿಲ್ಲ. ಆತನ ಸಂಬಂಧಿಕರ ಪತ್ತೆಗಾಗಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.