ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ; ಒಕ್ಕಲಿಗ ನಾಯಕನಿಗೆ ವಿಪಕ್ಷ ಸ್ಥಾನ ಗ್ಯಾರೆಂಟಿ
ಬೆಂಗಳೂರು; ಇಂದು ರಾಜ್ಯ ಬಿಜೆಪಿಯ ಪಾಲಿಗೆ ಮಹತ್ವದ ದಿನ. ಇಂದು ಸಂಜೆಯ ವೇಳೆಗೆ ವಿಪಕ್ಷ ನಾಯಕನ ಆಯ್ಕೆ ಬಹುತೇಕ ಖಚಿತವಾಗಲಿದೆ. ಒಕ್ಕಲಿಗ ನಾಯಕನಿಗೆ ವಿಪಕ್ಷ ನಾಯಕನ ಸ್ಥಾನ ಪಕ್ಕಾ ಆಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಆರ್.ಅಶೋಕ್ ಅಥವಾ ಅಶ್ವತ್ಥನಾರಾಯಣ್ ಇಬ್ಬರಲ್ಲಿ ಒಬ್ಬರಿಗೆ ವಿಪಕ್ಷ ನಾಯಕನ ಸ್ಥಾನ ಸಿಗುವ ಎಲ್ಲಾ ಸಾಧ್ಯತೆ ಇದೆ. ಇಂದು ಸಂಜೆ ಆರು ಗಂಟೆಗೆ ಬೆಂಗಳೂರಿನ ಐಟಿಸಿ ಗಾರ್ಡೆನಿಯಾ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ.
ಕೇಂದ್ರದಿಂದ ವೀಕ್ಷಕರು ಬರಲಿದ್ದು, ಶಾಸಕರ ಅಭಿಪ್ರಾಯ ಕೇಳಲಾಗುತ್ತದೆ. ಪರಿಷತ್ ಸದಸ್ಯರು ಹಾಗೂ ವಿಧಾನಸಭಾ ಸದಸ್ಯರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದೆ. ಶಾಸಕರ ಅಭಿಪ್ರಾಯ ಪಡೆದ ನಂತರ ಅಳೆದೂ ತೂಗಿ ಹೈಕಮಾಂಡ್ ವಿಪಕ್ಷ ನಾಯಕನ ಆಯ್ಕೆ ಮಾಡಲಿದೆ.
ಬಸನಗೌಡ ಪಾಟೀಲ್ ಯತ್ನಾಳ್, ವಿ ಸುನೀಲ್ ಕುಮಾರ್, ಅಶ್ವತ್ಥ ನಾರಾಯಣ, ಆರ್ ಅಶೋಕ್, ಆರಗ ಜ್ಞಾನೇಂದ್ರ ವಿಪಕ್ಷ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾಯತ ನಾಯಕನಿಗೆ ನೀಡಿರುವುದರಿಂದ ವಿಪಕ್ಷ ನಾಯಕನ ಸ್ಥಾನವನ್ನು ಒಕ್ಕಲಿಗ ನಾಯಕನಿಗೆ ನೀಡೋದು ಬಹುತೇಕ ಖಚಿತವಾಗಿದೆ.
ಒಂದು ವೇಳೆ ಹಿಂದುಳಿದ ವರ್ಗದ ನಾಯಕನಿಗೆ ವಿಪಕ್ಷ ನಾಯಕನ ಸ್ಥಾನ ನೀಡೋದಾದರೆ ಸುನಿಲ್ ಕುಮಾರ್‌ಗೆ ಈ ಸ್ಥಾನ ಸಿಗಲಿದೆ. ಇನ್ನು ವಿಧಾನ ಪರಿಷತ್ ವಿಪಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಒಕ್ಕಲ ಸಮುದಾಯಕ್ಕೆ ನೀಡಿದರೆ, ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ಹಿಂದುಳಿದ ವರ್ಗಕ್ಕೆ ನೀಡುವ ಬಗ್ಗೆ ಚಿಂತನೆಗಳು ನಡೆದಿವೆ. ಕೋಟ ಶ್ರೀನಿವಾಸ ಪೂಜಾರಿ, ತೇಜಸ್ವಿನಿ ಗೌಡ, ಛಲವಾದಿ ನಾರಾಯಣಸ್ವಾಮಿ ಮತ್ತು ಭಾರತಿ ಶೆಟ್ಟಿ ರೇಸ್ನಲ್ಲಿದ್ದಾರೆ. ಆದ್ರೆ, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಣೆ ಹಾಕುವ ಸಾಧ್ಯತೆಗಳು ಹೆಚ್ಚಿವೆ.