ಕೆಲಸದಿಂದ ತೆಗದಿದ್ದಕ್ಕೆ ಕೋಪ; ಟಿಸಿಎಸ್ ಕಂಪನಿಗೆ ಯುವತಿ ಬಾಂಬ್ ಬೆದರಿಕೆ ಕರೆ!
ಬೆಂಗಳೂರು; ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಕೋಪಗೊಂಡ ಯುವತಿಯೊಬ್ಬಳು ಟಿಸಿಎಸ್ ಕಂಪನಿಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟಿಸಿಎಸ್ ಕಂಪನಿಯಲ್ಲಿ ಯುವತಿಯೊಬ್ಬಳು ಕೆಲಸ ಮಾಡುತ್ತಿದ್ದು, ಆಕೆಯನ್ನು ಇತ್ತೀಚೆಗೆ ಕೆಲಸದಿಂದ ತೆಗೆದುಹಾಕಲಾಗಿತ್ತು. ಇದೇ ಕಾರಣಕ್ಕೆ ಆಕೆ, ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯವಾಗಿದ್ದ ಕ್ಯಾಬ್ ಚಾಲಕನಿಗೆ ಕರೆ ಮಾಡಿದ್ದ ಯುವತಿ, ಕಂಪನಿಯ ಬಿ ಬ್ಲಾಕ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಳು.
ಇದರಿಂದ ಗಾಬರಿಯಾದ ಕ್ಯಾಬ್ ಚಾಲಕ ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದ. ಇದರಿಂದಾಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರೆಲ್ಲಾ ಹೊರಗೆ ಬಂದಿದ್ದರು. ನಂತರ ಕಂಪನಿಯ ಅಧಿಕಾರಿಗಳು, ಬೆಂಗಳೂರಿನ ಪರಪ್ಪನ ಅಗ್ರಹಾರದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಬಂದ ಪರಿಶೀಲನೆ ನಡೆಸಿತು. ಆದ್ರೆ ಯಾವುದೇ ಬಾಂಬ್ ಇಲ್ಲ ಅನ್ನೋದು ಕನ್ಫರ್ಮ್ ಆಯ್ತು.
ಕರೆ ಮಾಡಿದ್ದ ಯುವತಿ ಮೂಲತಃ ಬೆಳಗಾವಿಯವಳಾಗಿದ್ದಾಳೆ. ಈಕೆ ಟಿಸಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆದ್ರೆ ಯಾವುದೋ ಕಾರಣಕ್ಕೆ ಆಕೆಯನ್ನು ಕೆಲಸದಿಂದ ತೆಗೆಯಲಾಗಿತ್ತು. ಆಕೆ ಕುಡಿದ ಮತ್ತಿನಲ್ಲಿ ಈ ಕರೆ ಮಾಡಿದ್ದಳು ಎಂದು ಗೊತ್ತಾಗಿದೆ. ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ.