BengaluruPolitics

ಸೋಮಣ್ಣ ಕಾಂಗ್ರೆಸ್‌ಗೆ ಹೋದರೆ, ತುಮಕೂರಿನಿಂದ ಲೋಕಸಭೆಗೆ!

ಬೆಂಗಳೂರು; ಕಳೆದ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಮುಂಚಿನಿಂದಲೂ ಮಾಜಿ ಸಚಿವ ವಿ.ಸೋಮಣ್ಣ ಅಸಮಾಧಾನದಿಂದಲೇ ಇದ್ದರು. ಅವರು ಊಹೆಯೂ ಮಾಡದ ರೀತಿಯಲ್ಲಿ ಎರಡು ಕಡೆ ಟಿಕೆಟ್‌ ನೀಡಿದಾಗಲೂ ಅವರಿಗೆ ಬೇಸರವಾಗಿತ್ತು. ಆದ್ರೆ ಅನಿವಾರ್ಯವಾಗಿ ಸ್ಪರ್ಧಿಸಿ ಎರಡೂ ಕಡೆ ಸೋತರು. ಕೊನೆಗೆ ಸೀನಿಯಾರಿಟಿ ಆಧಾರದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗಬಹುದು ಎಂಬ ಆಸೆ ವಿ.ಸೋಮಣ್ಣ ಅವರಿಗಿತ್ತು. ಆದ್ರೆ ಅದೂ ಸಿಕ್ಕಿಲ್ಲ. ಇದರಿಂದ ವಿ.ಸೋಮಣ್ಣ ತೀವ್ರವಾಗಿ ನಿರಾಸೆಗೊಂಡಿದ್ದಾರೆ.

ಯಡಿಯೂರಪ್ಪ ಹಾಗೂ ವಿಜಯೇಂದ್ರ ಇಬ್ಬರಿಗೂ ಸೋಮಣ್ಣ ಅಂದ್ರೆ ಅಷ್ಟಕ್ಕಷ್ಟೇ. ಹೀಗಿರುವಾಗ ವಿಜಯೇಂದ್ರ ಅವರೇ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಹೀಗಾಗಿ ಸೋಮಣ್ಣ ಅವರು ಪಕ್ಷದಲ್ಲಿ ಹೊಂದಿಕೊಂಡು ಹೋಗೋದು ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಸೋಮಣ್ಣ ಅವರು ಕಾಂಗ್ರೆಸ್‌ನತ್ತ ಮುಖ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ವಿಧಾನಸಭಾ ಚುನಾವಣೆ ಸಮಯದಲ್ಲೇ ಸೋಮಣ್ಣ ಕಾಂಗ್ರೆಸ್‌ ಸೇರುವ ಬಗ್ಗೆ ಚಿಂತನೆ ನಡೆಸಿದ್ದರು ಎಂಬ ಮಾತುಗಳೂ ಇವೆ.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸೋಮಣ್ಣ ಅವರನ್ನು ಮರಳಿ ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೆಯೂ ಕೂಡಾ ಡಿ.ಕೆ.ಶಿವಕುಮಾರ್‌ ಈ ಪ್ರಯತ್ನ ಮಾಡಿದ್ದರು. ಈಗ ಮತ್ತೆ ಈ ಬಗ್ಗೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಸೋಮಣ್ಣ ಅವರು ಕಾಂಗ್ರೆಸ್‌ಗೆ ಬಂದರೆ ಅವರನ್ನು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್‌ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಆದ್ರೆ ಸೋಮಣ್ಣ ಈ ಬಗ್ಗೆ ಇನ್ನೂ ಏನೂ ಹೇಳಿಲ್ಲ. ಆದ್ರೆ ಅವರಿಗೆ ಹಲವು ಕಾರಣಗಳಿಗಾಗಿ ಬಿಜೆಪಿ ನಾಯಕರ ಮೇಲೆ ಅಸಮಾಧಾನ ಇರೋದಂತೂ ಸತ್ಯ. ಅದನ್ನು ಹಲವು ಬಾರಿ ಹೊರಹಾಕಿದ್ದಾರೆ ಕೂಡಾ. ಈಗ ರಾಜ್ಯಾಧ್ಯಕ್ಷ ಸ್ಥಾನವೂ ಕೈತಪ್ಪಿರುವುದರಿಂದ ಅವರ ನಡೆ ಏನಾರಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Share Post