Bengaluru

ಸಿಎಂ ಸ್ಥಾನದ ಕನವರಿಕೆಯಲ್ಲಿ ಸಿದ್ದು, ಡಿಕೆಶಿ; ಮುಳುವಾಗುತ್ತಾ ನಾಯಕತ್ವ ಕದನ..?

ಬೆಂಗಳೂರು; ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬುದರ ಬಗ್ಗೆ ಪೈಪೋಟಿಗಳು ಏರ್ಪಡುತ್ತಿವೆ. ಈ ಕಾರಣಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳು ಸೃಷ್ಟಿಯಾಗಿವೆ ಅನ್ನೋದು ಜಗಜ್ಜಾಹಿರ. ಆದ್ರೆ ಇತ್ತೀಚೆಗೆ ರಾಜ್ಯದ ನಾಯಕರು ದೆಹಲಿಗೆ ಹೋಗಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿದ್ದರು. ಈ ವೇಳೆ ಹೈಕಮಾಂಡ್‌ ನಾಯಕರು ವ್ಯಕ್ತಿ ಪೂಜೆ ಬೇಡ. ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಅಲ್ಲ ಎಂದು ಹೇಳಿ ಶಾಂತಿ ಮಂತ್ರ ಪಠಿಸಿ ಕಳುಹಿಸಿದ್ದರು. ಅದಾದ ಮೇಲೂ ನಾಯಕರ ಸಿಎಂ ಸ್ಥಾನದ ಕನವರಿಕೆ ನಿಂತಿಲ್ಲ.

ಜುಲೈ 17 ರಂದು ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ಕಾರ್ಯಕ್ರಮವೊಂದಿತ್ತು. ಅದರಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್‌ ಅವರು, ಎಸ್.ಎಂ.ಕೃಷ್ಣ ನಂತರ ಸಮುದಾಯಕ್ಕೆ ಒಂದು ಅವಕಾಶ ಒದಗಿ ಬರುತ್ತಿದೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದರು. ಅಂದರೆ ಅವರು ನಾನೇ ಸಿಎಂ ಆಗುತ್ತೇನೆ. ನನಗೆ ಅವಕಾಶ ಮಾಡಿಕೊಡಿ. ನನ್ನನ್ನು ಬೆಂಬಲಿಸಿ ಎಂಬ ಅರ್ಥದಲ್ಲಿ ಅಲ್ಲಿ ಮಾತನಾಡಿದ್ದರು.

ಇನ್ನು ಅದಕ್ಕೂ ಒಂದು ದಿನ ಮುಂಚೆ, ಅಂದರೆ ಜುಲೈ 16ರಂದು ಬಾಗಲಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನಾನು ಮತ್ತೆ ಸಿಎಂ ಆದರೆ ನೇಕಾರರ ಸಾಲಮನ್ನಾ ಮಾಡುತ್ತೇನೆ. ಬಜೆಟ್‍ನಲ್ಲಿ ಜಾರಿ ಮಾಡುತ್ತೇನೆ. ಪಕ್ಷದ ಪ್ರಣಾಳಿಕೆಯಲ್ಲಿ ತರುತ್ತೇನೆ ಎಂದಿದ್ದರು. ಇತ್ತ ಡಿ.ಕೆ.ಶಿವಕುಮಾರ್‌ ಕೂಡಾ ಸಿಎಂ ಸ್ಥಾನದ ಕನವರಿಕೆಯಲ್ಲಿದ್ದಾರೆ. ಹೀಗಾಗಿ, ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಇಬ್ಬರು ನಾಯಕರು ಮುಸುಕಿನ ಗುದ್ದಾಟ ನಡೆಸುತ್ತಿದ್ದಾರೆ ಅನ್ನೋದು ಇದರಿಂದಾನೇ ಗೊತ್ತಾಗುತ್ತದೆ.

ಸಿದ್ದರಾಮಯ್ಯ ಅವರು ನನಗೆ ಇದು ಕೊನೆ ಚುನಾವಣೆ ಎಂದು ಹೇಳುತ್ತಿದ್ದಾರೆ.  2023ರ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸುತ್ತೇವೆ ಎಂದು ಹೇಳುತ್ತಲೇ, ನಾನು ಸಿಎಂ ಅಭ್ಯರ್ಥಿ ಎಂದೇ ಹೇಳುತ್ತಿದ್ದಾರೆ. ಅತ್ತ ಹೈಕಮಾಂಡ್‌ ಬಳಿ ತನ್ನನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿ ಎಂದು ಒತ್ತಡ ಹೇರಿದ್ದಾರೆ. ಆದ್ರೆ, ಕಾಂಗ್ರೆಸ್‌ ಹೈಕಮಾಂಡ್‌ ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸುತ್ತಿಲ್ಲ. ಬದಲಾಗಿ ಕಾಂಗ್ರೆಸ್‌ ವ್ಯಕ್ತಿಗೆ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಹೇಳಿ ಕಳುಹಿಸಿದೆ. ಹೀಗಾಗಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಇಬ್ಬರೂ ತಮ್ಮ ಪ್ರಾಬಲ್ಯ ಮೆರೆಯಲು ಬೇರೆ ಬೇರೆ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಅದರ ಭಾಗವೇ ಸಿದ್ದರಾಮಯ್ಯ ಅವರು ಹುಟ್ಟುಹಬ್ಬದ ಕಾರ್ಯಕ್ರಮ ಎಂದು ಹೇಳಲಾಗುತ್ತಿದೆ.

Share Post