ಅಪ್ರಾಪ್ತೆ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ
ಮಂಡ್ಯ; ಮದ್ದೂರು ಪಟ್ಟಣ ವ್ಯಾಪ್ತಿಯಲ್ಲಿ ಮೂವರು ವ್ಯಕ್ತಿಗಳು ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಹಪಾಠಿಗಳೇ 17 ವರ್ಷದ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪುನೀತ್, ಮಂಜುನಾಥ್ ಹಾಗೂ ಸಿದ್ದರಾಜು ಬಂಧಿತ ಆರೋಪಿಗಳಾಗಿದ್ದಾರೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದೇ ಅಲ್ಲದೆ, ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಅದರ ವಿಡಿಯೋಗಳು ವೈರಲ್ ಆದ ಮೇಲೆ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ತಂದೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಮೂವರೂ ಆರೋಪಿಗಳು ಮದ್ದೂರು ತಾಲ್ಲೂಕಿನವರೇ ಎಂದು ತಿಳಿದುಬಂದಿದೆ. ಪ್ರಕರಣದ ಎ1 ಆರೋಪಿ ಪುನೀತ್ ಮೈಸೂರಿನ ಯುವ ದಸರಾದಲ್ಲಿ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡಿದ್ದನಂತೆ. ಆಕೆಯನ್ನು ಪ್ರೀತಿಸುತ್ತಿರುವುದಾಗಿ ಆತ ನಂಬಿಸಿದ್ದಾನೆ. ಆಕೆಯೊಂದಿಗೆ ಸಲುಗೆ ಬೆಸೆದಿದ್ದಾನೆ.
ನವೆಂಬರ್ 4 ರಂದು ಬಾಲಕಿಯನ್ನು ಮದ್ದೂರಿಗೆ ಕರೆಸಿಕೊಂಡಿದ್ದ ಪುನೀತ್ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಇತರ ಇಬ್ಬರು ಸ್ನೇಹಿತರನ್ನು ಕರೆಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅದನ್ನು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡು ಬಾಲಕಿಯನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಕರೆದಾಗಲೆಲ್ಲಾ ಬರಬೇಕು ಎಂದು ಧಮಕಿ ಹಾಕಿ ಕಳುಹಿಸಿದ್ದರಂತೆ.
ಇದಾದ ಬಳಿಕ ಅಪ್ರಾಪ್ತೆ ನಡೆದ ಘಟನೆಯನ್ನು ಪೋಷಕರ ಬಳಿ ಹೇಳಿಕೊಂಡಿದ್ದಳು. ಕೂಡಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.