ಹೈಕಮಾಂಡ್ ಸೂಚನೆ ಕೊಟ್ಟರೆ ನಾನು ಸಿಎಂ ಆಗೋಕೆ ಸಿದ್ಧ; ಸಚಿವ ಪ್ರಿಯಾಂಕ್ ಖರ್ಗೆ
ಮೈಸೂರು; ಹೈಕಮಾಂಡ್ ಸೂಚನೆ ಕೊಟ್ಟರೆ ನಾನು ಕೂಡಾ ಮುಖ್ಯಮಂತ್ರಿ ಸ್ಥಾನ ಅಲಂಕರಿಸೋದಕ್ಕೆ ಸಿದ್ಧನಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಐದು ವರ್ಷ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಹೇಳಿದ್ದರು. ಇದಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ, ಅದು ಸಿದ್ದರಾಮಯ್ಯ ಅವರ ವೈಯಕ್ತಿಕ ಹೇಳಿಕೆ. ಯಾರು ಸಿಎಂ ಆಗಬೇಕು, ಯಾರು ಮುಂದುವರೆಯಬೇಕು ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಅಧಿಕಾರ ವಹಿಸಿಕೊಳ್ಳುವಾಗ ದೆಹಲಿಯಲ್ಲಿ ನಾಲ್ಕು ಜನ ಕುಳಿತು ಮಾತನಾಡಿದ್ದಾರೆ. ಅಲ್ಲಿ ಏನು ತೀರ್ಮಾನ ಆಗಿದೆ ಅನ್ನೋದು ನನಗೆ ಗೊತ್ತಿಲ್ಲ. ಅಲ್ಲಿದ್ದ ನಾಲ್ವರಿಗೆ ಮಾತ್ರ ಅದು ಗೊತ್ತಿದೆ. ಹೀಗಾಗಿ, ಸಿಎಂ ಮುಂದವರಿಕೆ ಅಥವಾ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ನಮ್ಮ ಹೈಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತೆ. ಒಂದು ವೇಳೆ ನೀನು ಸಿಎಂ ಆಗು ಎಂದು ನನಗೆ ಆಹ್ವಾನ ಕೊಟ್ಟರೆ ನಾನೇ ಆ ಸ್ಥಾನ ಅಲಂಕರಿಸಲು ಸಿದ್ಧನಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಿಎಂ ತಮ್ಮ ಇಚ್ಛೆ ತಿಳಿಸಿದ್ದಾರೆ. ಅದು ಕಲ್ಲಿನಲ್ಲಿ ಕೆತ್ತಿದ ಶಾಸನವಲ್ಲ. ಎಲ್ಲವೂ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದೂ ಪ್ರಿಯಾಂಕ್ ಹೇಳಿದ್ದಾರೆ.