CrimeNational

ಮದುವೆಯಾಗಲು ನಿರಾಕರಿಸಿದ ಪ್ರಿಯಕರ; ಕೊಚ್ಚಿ ಕೊಲೆ ಮಾಡಿದ ಯುವತಿ!

ರಾಂಚಿ; ಪ್ರೀತಿಸಿದ ಯುವಕ ಕೈಕೊಡೋದು, ಯುವತಿ ಆತ್ಮಹತ್ಯೆ ಮಾಡಿಕೊಳ್ಳೋ ಪ್ರಕರಣಗಳನ್ನು ನಾವು ಸಾಕಷ್ಟು ನೋಡಿರುತ್ತೇವೆ. ಇಲ್ಲದೇ ಹೋದರೆ ಪ್ರೀತಿಗೆ ನಿರಾಕರಿಸಿದ ಯುವತಿಯನ್ನು ಕೊಂದ ಪಾಪಿಗಳ ಸ್ಟೋರಿಗಳನ್ನೂ ನೋಡಿರುತ್ತೇವೆ. ಆದ್ರೆ ಇದು ಡಿಫರೆಂಟ್‌ ಸ್ಟೋರಿ.. ಇಲ್ಲಿ ಯುವತಿಯೇ ಯುವಕನನ್ನು ಕೊಲೆ ಮಾಡಿದ್ದಾಳೆ. ಪ್ರೀತಿಸಿ ಯುವಕ ಮದುವೆಯಾಗಲು ನಿರಾಕರಿಸಿದ್ದಕ್ಕೆ ಕೊಡಲಿಯಿಂದ ಆತನನ್ನು ಕೊಚ್ಚಿ ಕೊಲೆ ಮಾಡಿದ್ದಾಳೆ.

ಜಾರ್ಖಂಡ್‌ನ ಕೊಲ್ಹುವಾ ಎಂಬಲ್ಲಿ ಈ ಘಟನೆ ನಡೆದಿದೆ. ಇಪ್ಪತ್ತು ವರ್ಷದ ಅಂಜಲಿ ಎಂಬಾಕೆಯೇ ಕೊಲೆ ಮಾಡಿದ ಯುವತಿಯಾಗಿದ್ದು, ಈಕೆಯ ಪ್ರಿಯಕರ ಧರ್ಮನ್‌ ಓರಾನ್‌ ಎಂಬಾತ ಬರ್ಬರವಾಗಿ ಹತ್ಯೆಯಾಗಿದ್ದಾನೆ.

ಇಬ್ಬರು ಕೆಲ ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದ್ರೆ ಮದುವೆ ವಿಚಾರ ಬಂದಾಗ ಧರ್ಮನ್‌ ನಿರಾಕರಣೆ ಮಾಡುತ್ತಲೇ ಬಂದಿದ್ದ. ಹೀಗಾಗಿ ಅಂಜಲಿ ತನ್ನ ಪ್ರಿಯಕರ ಧರ್ಮನ್‌ ನನ್ನು ಕೊಲೆ ಮಾಡುವ ತೀರ್ಮಾನಕ್ಕೆ ಬಂದಿದ್ದಳು. ಏನೋ ನೆಪ ಹೇಳಿ ಧರ್ಮನ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆಸಿದ್ದಳು.

ಆತನೊಂದಿಗೆ ಸ್ವಲ್ಪ ಹರಟೆ ಹೊಡೆದಿದ್ದಳು. ಕೆಲ ಹೊತ್ತಾದ ಮೇಲೆ ಧರ್ಮನ್‌ಗೆ ನಿದ್ದೆ ಬಂದಿದ್ದು, ಹಾಗೆಯೇ ಬಂಡೆಯೊಂದರ ಮೇಲೆ ನಿದ್ದೆಗೆ ಜಾರಿದ್ದಾನೆ. ಇದೇ ಸರಿಯಾದ ಸಮಯವೆಂದು ಅರಿದ ಅಂಜಲಿ, ಮೊದಲೇ ತಂದಿಟ್ಟುಕೊಂಡಿದ್ದ ಕೊಡಲಿಯಿಂದ ಆತನನ್ನು ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾಳೆ. ನಂತರ ಮೃತದೇಹವನ್ನು ಪೊದೆಯೊಂದರಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದಳು. ಪ್ರಕರಣ ಬಯಲಾದ ಮೇಲೆ ಆರೋಪಿ ಅಂಜಲಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೊಲೆಗೆ ಕಾರಣವನ್ನು ಅಂಜಲಿ ಬಿಚ್ಚಿಟ್ಟಿದ್ದಾಳೆ.

 

Share Post