ಕಾರು ಓಡಿಸುತ್ತಿದ್ದಾಗ ಹಠಾತ್ ಹೃದಯಾಘಾತ; ಆರ್‌ಎಸ್‌ಎಸ್ ಮುಖಂಡ ಸಾವು..!
ಬಾಗಲಕೋಟೆ; ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಡೀಸೆಲ್ ಹಾಕಿಸಿ ಮುಂದಕ್ಕೆ ಹೋಗುತ್ತಿದ್ದಂತೆ ಹೃದಯಾಘಾತ ಸಂಭವಿಸಿದ್ದು, ಆರ್‌ಎಸ್‌ಎಸ್ ಮುಖಂಡರೊಬ್ಬರು ಕಾರಿನಲ್ಲೇ ಪ್ರಾಣಬಿಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ಬಳಿಯ ಲೋಕಾಪುರ ಪಟ್ಟಣದಲ್ಲಿ ಕಳೆದ ರಾತ್ರಿ ಈ ದುರ್ಘಟನೆ ನಡೆದಿದ್ದು, ಆರ್‌ಎಸ್‌ಎಸ್ ಮುಖಂಡ ಸಿದ್ದು ಚಿಕ್ಕದಾನಿ ಎಂಬುವವರೇ ಸಾವನ್ನಪ್ಪಿದವರು. ಇವರಿಗೆ 45 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.
ರಾತ್ರಿ ಅವರು ಪೆಟ್ರೋಲ್ ಬಂಕ್‌ನಲ್ಲಿ ಡೀಸೆಲ್ ಹಾಕಿಸಿದ ಮೇಲೆ ಕಾರು ಒಂದೆರಡು ಮೀಟರ್ ದೂರ ಹೋಗಿದೆ. ಅನಂತರ ಕಾರನ್ನು ಸೈಡ್‌ಗೆ ನಿಲ್ಲಿಸಲಾಗಿದೆ. ಪೆಟ್ರೋಲ್ ಬಂಕ್ ಸಿಬ್ಬಂದಿ ಇಂದು ಬೆಳಗ್ಗೆ ಕಾರು ನಿಂತಿದ್ದನ್ನು ನೋಡಿ ಅನುಮಾನಗೊಂಡಿದ್ದಾರೆ. ರಾತ್ರಿ ಡೀಸೆಲ್ ಹಾಕಿಸಿದ ಕಾರು ಇದೇ. ಯಾಕೆ ಇನ್ನೂ ಇಲ್ಲೇ ನಿಂತಿದೆ ಎಂದು ಪರೀಕ್ಷೆ ಮಾಡಿದ್ದಾರೆ. ನೋಡಿದರೆ ಕಾರಿನಲ್ಲಿ ಡ್ರೈವಿಂಗ್ ಸೀಟ್‌ನಲ್ಲಿ ಕುಳಿತಿದ್ದ ಸಿದ್ದು ಚಿಕ್ಕದಾನಿ ಸಾವನ್ನಪ್ಪಿರುವುದು ಕಂಡುಬಂದಿದೆ.