Bengaluru

40 ಪಲ್ಲಕ್ಕಿ ಬಸ್‌ಗಳನ್ನು ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು; ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಹೆಸರಿನ ನಲವತ್ತು ನಾನ್‌ ಎಸಿ ಸ್ಲೀಪರ್‌ ಬಸ್‌ಗಳನ್ನು ಲೋಕಾರ್ಪಣೆ ಮಾಡಿದೆ. ವಿಧಾನಸೌಧದ ಬಳಿ ಸಿಎಂ ಸಿದ್ದರಾಮಯ್ಯ ಅವರು ಈ ಬಸ್‌ಗಳಿಗೆ ಚಾಲನೆ ನೀಡಿದ್ದಾರೆ. ಇಂದಿನಿಂದಲೇ ಈ ಬಸ್‌ಗಳು ರಾಜ್ಯಾದ್ಯಂತ ಕಾರ್ಯನಿರ್ವಹಿಸಲಿವೆ ಎಂದು ತಿಳಿದುಬಂದಿದೆ. 

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಈ ಪಲ್ಲಕ್ಕಿ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿದರು. ಇದೇ ವೇಳೆ 100 ಕರ್ನಾಟಕ ಸಾರಿಗೆ ಬಸ್​ಗಳಿಗೂ ಚಾಲನೆ ನೀಡಲಾಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಚಿವ ಕೆ.ಹೆಚ್ ಮುನಿಯಪ್ಪ, ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್‌ ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಪಲ್ಲಕ್ಕಿ ಬಸ್‌, ಬಿಎಸ್-6 ತಂತ್ರಜ್ಞಾನದ ಮಾದರಿಯ ಹೆಚ್.ಪಿ ಇಂಜಿನ್ ಹೊಂದಿದ್ದು, ಹೈಟೆಕ್ ವಿನ್ಯಾಸದ 30 ಸ್ಲೀಪರ್ ಬರ್ತ್ ಸೀಟ್​ಗಳನ್ನು ಹೊಂದಿದೆ. ಪ್ರತಿ ಸೀಟಿಗೆ ಮೊಬೈಲ್, ಲ್ಯಾಪ್​ಟಾಪ್​ಗಳ ಚಾರ್ಜಿಂಗ್, ಮೊಬೈಲ್ ಸ್ಟ್ಯಾಂಡ್ ಅಳವಡಿಸಲಾಗಿದೆ. ಸೀಟ್ ನಂಬರ್ ಮೇಲೆ ಎಲ್​ಇಡಿ ಅಳವಡಿಸಲಾಗಿದ್ದು, ಓದಲು ಉತ್ತಮ ಬೆಳಕಿನ ಎಲ್.ಇ.ಡಿ ಲೈಟ್ ಅಳವಡಿಕೆ ಮಾಡಲಾಗಿದೆ.
ಬಸ್​ನಲ್ಲಿ ಆಡಿಯೋ ಸ್ವೀಕರ್​ಗಳ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ ಕೂಡಾ ಮಾಡಲಾಗಿದೆ. ಡಿಜಿಟಲ್ ಗಡಿಯಾರ, ಎಲ್.ಇ.ಡಿ. ಫ್ಲೋರ್, ಪ್ರಯಾಣಿಕರಿಗೆ ಚಪ್ಪಲಿ ಇಡಲು ಸ್ಥಳಾವಕಾಶ, ತಲೆದಿಂಬಿನ ವ್ಯವಸ್ಥೆ, ಚಾಲಕರಿಗೆ ಸಹಾಯವಾಗಲು ಬಸ್ ಹಿಂಭಾಗದಲ್ಲಿ ಹೈಟೆಕ್ -ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.

Share Post