ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಬೆಳಗಾವಿ ಅಧಿವೇಶನ: ಸ್ಪೀಕರ್ ಕಾಗೇರಿ
ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಡಿ.13ರಿಂದ 24ರವರೆಗೆ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ನಡೆಸುತ್ತೇವೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಬೆಳಗಾವಿ ಅಧಿವೇಶನದ ಪೂರ್ವ ಸಿದ್ಧತೆ ಕುರಿತು ಸುವರ್ಣ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಕಾಗೇರಿಯವರು, ಈ ಬಾರಿ ಅಧಿವೇಶನಕ್ಕೆ ಅನೇಕ ಸವಾಲುಗಳು ಎದುರಾಗಿವೆ. ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿದ್ದು, ಅಧಿಕಾರಿಗಳು ಪರಿಹಾರ ಕಾರ್ಯ ಕೈಗೊಳ್ಳಬೇಕಿದೆ. ಡಿ.14ಕ್ಕೆ ವಿಧಾನಪರಿಷತ್ ಚುನಾವಣೆ ಮತಎಣಿಕೆ ಇದೆ. ಇದೇ ತಿಂಗಳಲ್ಲಿ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಚುನಾವಣೆಯೂ ನಡೆಯಲಿದೆ. ಬೆಳಗಾವಿ ಜಿಲ್ಲಾಡಳಿತದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಇವೆಲ್ಲ ಸವಾಲುಗಳನ್ನು ಅವಕಾಶವಾಗಿ ಸ್ವೀಕರಿಸಿ ಅಧಿವೇಶನ ನಡೆಸಲಾಗುವುದು ಎಂದು ಹೇಳಿದರು.
2018ರ ನಂತರ ಬೆಳಗಾವಿಯಲ್ಲಿ ಅಧಿವೇಶನ ನಡೆದಿಲ್ಲ. ನಾವು ಸಮಾಲೋಚಿಸಿದಾಗ, ಈ ಬಾರಿ ಅಧಿವೇಶನ ನಡೆಸಲು ಸದ್ಯ ಯಾವುದೇ ಆತಂಕವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು. ಅಧಿವೇಶನಕ್ಕೆ ಬರುವ ಸಚಿವರು, ಶಾಸಕರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಆಹಾರದ ವ್ಯವಸ್ಥೆ ಬಗ್ಗೆಯೂ ಎಚ್ಚರ ವಹಿಸಲಾಗಿದೆ. ವಿವಿಧ ಭಾಗಗಳಿಂದ ಬರುವವರಿಗೆ ಅನುಕೂಲ ಆಗುವಂತೆ ಉತ್ತಮ ಆಹಾರ ವ್ಯವಸ್ಥೆಗೆ ಸೂಚಿಸಲಾಗಿದೆ. ವಾಹನಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ ಎಂದು ಕಾಗೇರಿ ತಿಳಿಸಿದರು.