National

ತಮಿಳುನಾಡಿಗೆ ನೀರು ಬಿಡುವ ವಿಚಾರ; ಸಂಜೆ ಕೇಂದ್ರ ಜಲಶಕ್ತಿ ಸಚಿವರ ಭೇಟಿ

ನವದೆಹಲಿ; ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತೆ ತಮಿಳುನಾಡಿಗೆ 24 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಸೂಚನೆ ನೀಡಿದೆ. ಆದ್ರೆ ರಾಜ್ಯದಲ್ಲಿ ನೀರಿನ ಸಂಗ್ರಹವಿಲ್ಲದ ಕಾರಣ ನೀರು ಬಿಡಲು ಆಗುತ್ತಿಲ್ಲ ಎಂದು ರಾಜ್ಯ ವಾದ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯದ ಸಂಸದರ ಸಭೆ ನಡೆಯಿತು. ಈ ಸಭೆಯಲ್ಲಿ ಸಂಸದರು ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀರು ಖಾಲಿಯಾದ ಮೇಲೆ ಮಾತನಾಡಿದರೆ ಏನು ಉಪಯೋಗ..? ಮೊದಲೇ ನಮ್ಮನ್ನು ಯಾಕೆ ಕರೆದಿಲ್ಲ ಎಂದು ಸಂಸದ ಸದಾನಂದ ಗೌಡ ಅಸಮಾಧಾನ ಹೊರಹಾಕಿದ್ದಾರೆ.

ಇದೇ ವೇಳೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ನಾವು ಅನುಮತಿ ಕೇಳಿದ್ದೆವು. ಅವರು ಸಮಯವೇ ಕೊಡಲಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಇದರಲ್ಲಿ ಪ್ರಧಾನಿಯವರನ್ನು ಎಳೆತರುವುದು ಸರಿಯಲ್ಲ ಎಂದಿದ್ದಾರೆ. ಇದೇ ವೇಳೆ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ರಾಜಕೀಯ ಬೇಡ, ಒಟ್ಟಾಗಿ ಹೋರಾಟ ಮಾಡೋಣ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಇಂದು ಸಂಜೆ 4.30ಕ್ಕೆ ಕೇಂದ್ರ ಜಲಶಕ್ತಿ ಸಚಿವರ ಭೇಟಿಗೆ ಅವಕಾಶ ಸಿಕ್ಕಿದ್ದು, ಸಂಜೆ ಸಿಎಂ, ಡಿಸಿಎಂ ಹಾಗೂ ರಾಜ್ಯದ ಸಂಸದರು ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಲಿದ್ದಾರೆ. ಇನ್ನು ಸಂಸದರ ಜೊತೆಗಿನ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿದರು. ನಾವು ಈಗಾಗಲೇ ತಮಿಳುನಾಡಿಕೆ 39.8 ಟಿಎಂಸಿ ನೀರನ್ನು ಬಿಟ್ಟಿದ್ದೇವೆ. ನಮಗೆ 105 ಟಿಎಂಸಿ ನೀರು ಬೇಕಾಗಿದೆ. ಆದ್ರೆ ನಮ್ಮ ಜಲಾಶಯಗಳಲ್ಲೇ ನೀರಿನ ಸಂಗ್ರಹವಿಲ್ಲ. ಕುಡಿಯುವ ನೀರಿಗೂ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹೇಗೆ ಬಿಡೋದು ಎಂದು ಪ್ರಶ್ನೆ ಮಾಡಿದ್ದಾರೆ.

ತಮಿಳುನಾಡಿನವರು ೨೪ ಸಾವಿರ ಕ್ಯೂಸೆಕ್‌ ನೀರು ಕೇಳಿದ್ದಾರೆ. ನಾವು ಹತ್ತು ಸಾವಿರ ಕ್ಯೂಸೆಕ್‌ ಬಿಡ್ತೇವೆ ಎಂದು ಹೇಳಿದೆವು. ಆದ್ರೆ ತಮಿಳುನಾಡಿನವರು ಇದಕ್ಕೆ ಒಪ್ಪದೆ ಸಭೆಯಿಂದ ಹೊರಹೋದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ಇತ್ತೀಚಿನ ಆದೇಶವನ್ನು ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

 

Share Post