ಆರ್.ಅಶೋಕ್ ಕ್ಷೇತ್ರದ ಹಲವು ಮುಖಂಡರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು; ಲೋಕಸಭೆ ಹಾಗೂ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಪರೇಷನ್ ಹಸ್ತ ಜೋರಾಗೇ ನಡೆಯುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್‌ನ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಹಿಂದೆ ಯಶವಂತಪುರ ಹಾಗೂ ಕೆಆರ್ ಪುರಂ ವಿಧಾನಸಭಾ ಕ್ಷೇತ್ರಗಳ ಹಲವು ಮುಖಂಡರು ಕಾಂಗ್ರೆಸ್ ಸೇರಿದ್ದರು. ಇದೀಗ ಮಾಜಿ ಸಚಿವ ಆರ್.ಅಶೋಕ್ ಅವರ ಕ್ಷೇತ್ರ ಪದ್ಮನಾಭನಗರದ ಹಲವು ಮುಖಂಡರು ಕಾಂಗ್ರೆಸ್ ಸೇರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖಂಡರನ್ನು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಬಿಜೆಪಿ ಮುಖಂಡರಾದ ಮಾಜಿ ಉಪಮೇಯರ್ ಎಲ್ ಶ್ರೀನಿವಾಸ್, ಪಾಲಿಕೆ ಮಾಜಿ ಸದಸ್ಯರಾದ ಶೋಭಾ ಅಂಜಿನಪ್ಪ, ಎಚ್ ನಾರಾಯಣ್, ಎಚ್ ಸುರೇಶ್, ವೆಂಕಟಸ್ವಾಮಿ ನಾಯ್ಡು, ಎಲ್ ಗೋವಿಂದರಾಜು, ಬಾಲಕೃಷ್ಣ, ಸುಗುಣ ಬಾಲಕೃಷ್ಣ, ನರಸಿಂಹ ನಾಯಕ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಂಜಿನಪ್ಪ, ಜೆಡಿಎಸ್ ಮುಖಂಡ ಪ್ರಸಾದ್ ಬಾಬು (ಕಬಡ್ಡಿ ಬಾಬು) ಚಿತ್ರ ನಟ ರವಿಕಿರಣ್, ಅಕ್ಬರ್ ಅಲಿಖಾನ್ ಮತ್ತಿತರ ಬಿಜೆಪಿ ಹಾಗೂ ಜೆ ಡಿ ಎಸ್ ಮುಖಂಡರು ಇಂದು ಕಾಂಗ್ರೆಸ್ ಸೇರಿದ್ದಾರೆ.
ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಚಿವ ರಾಮಲಿಂಗಾರೆಡ್ಡಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾರ್ಯಧ್ಯಕ್ಷ ಚಂದ್ರಪ್ಪ, ಎಂಎಲ್ಸಿ ಎಸ್ ರವಿ, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಮಾಜಿ ಮೇಯರ್ ಜೆ ಹುಚ್ಚಪ್ಪ ಉಪಸ್ಥಿತರಿದ್ದರು.