ಪ್ರತಿಸ್ಪರ್ಧಿ ವಿರುದ್ಧ ಮುರುಗೇಶ್ ನಿರಾಣಿ ಮಾನಹಾನಿ ನೋಟಿಸ್
ಬಾಗಲಕೋಟೆ; ಕಳೆದ ವಿಧಾನಸಭಾ ಚುನಾವಣೆ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಪೋಸ್ಟ್‌ಗಳನ್ನು ಹಾಕಿದ್ದಾರೆ. ಈ ಮೂಲಕ ನನ್ನ ಮಾನಹಾನಿ ಮಾಡಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿಯವರು ತಮ್ಮ ಪ್ರತಿಸ್ಪರ್ಧಿಗೆ ಮಾನಹಾನಿ ನೋಟಿಸ್ ಜಾರಿ ಮಾಡಿದ್ದಾರೆ. ಐದು ಕೋಟಿ ರೂಪಾಯಿ ಮಾನಹಾನಿ ಪರಿಹಾರ ನೀಡುವಂತೆ ನೋಟಿಸ್ ನೀಡಲಾಗಿದೆ.
ರೈತ ಸಂಘದ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಯಲ್ಲಪ್ಪ ಹೆಗಡೆಯವರಿಗೆ ನಿರಾಣಿಯವರು ತಮ್ಮ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ. 2023ರ ಫೆಬ್ರವರಿ, ಮಾರ್ಚ್, ಮೇ ತಿಂಗಳಲ್ಲಿ ಮಾಡಿದ್ದ ಪೋಸ್ಟ್ ಹಾಗೂ ಭಾಷಣಗಳಿಂದ ನನಗೆ ಮಾನಹಾನಿಯಾಗಿದೆ. ಹೀಗಾಗಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಜೊತೆಗೆ ಐದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ವಕೀಲ ಎಂ.ಎಸ್.ಟಂಕಸಾಲಿ ಅವರು ಈ ನೋಟಿಸ್ ಕಳುಹಿಸಿದ್ದಾರೆ. ನಮ್ಮ ಕಕ್ಷಿದಾರ ಮುರುಗೇಶ್ ನಿರಾಣಿ ಅವರಿಗೆ ದೈಹಿಕ ಹಾಗೂ ಮಾನಸಿಕ ತೊಂದರೆ ನೀಡಲಾಗಿದೆ. ಹೀಗಾಗಿ, ಯಲ್ಲಪ್ಪ ಅವರು ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮೂಲಕ ಮುರುಗೇಶ್ ನಿರಾಣಿ ಅವರ ಕ್ಷಮೆ ಕೇಳಬೇಕು. ಜೊತೆಗೆ ಪರಿಹಾರವಾಗಿ ಐದು ಕೋಟಿ ರೂಪಾಯಿ ನೀಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಒಂದು ವಾರದೊಳಗೆ ಈ ಷರತ್ತು ಈಡೇರಿಸದಿದ್ದರೆ, ಕೋರ್ಟ್ ನಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಕೇಸ್ ದಾಖಲು ಮಾಡೋದಾಗಿ ಎಚ್ಚರಿಕೆ ನೀಡಲಾಗಿದೆ..