ಗುಂಡು ಹಾರಿಸಿ ಪತ್ನಿಯನ್ನೇ ಕೊಂದ ನ್ಯಾಯಾಧೀಶ
ಸ್ಯಾಕ್ರಮೆಂಟೊ; ಕ್ಯಾಪಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ ನ್ಯಾಯಾಧೀಶರೊಬ್ಬರು ತನ್ನ ಸಹೋದ್ಯೋಗಿಗೆ ಸಂದೇಶವೊಂದನ್ನು ಕಳುಹಿಸಿದ್ದರು. ನಾನು ನಾಳೆ ಕೋರ್ಟ್‌ಗೆ ಬರುವುದಿಲ್ಲ. ಯಾಕಂದ್ರೆ ನಾನು ಪೊಲೀಸ್ ಕಸ್ಟಡಿಯಲ್ಲಿರುತ್ತೇನೆ ಎಂಬುದು ಆ ಸಂದೇಶದ ಸಾರವಾಗಿತ್ತು.
ಹೌದು, ಆ ನ್ಯಾಯಾಧೀಶ ತಮ್ಮ ಪತ್ನಿಯನ್ನೇ ಗುಂಡಿಕ್ಕಿ ಕೊಲೆ ಮಾಡಿದ್ದ. ಅನಂತರ ತನ್ನ ಸಹೋದ್ಯೋಗಿ ಮೇಲಿನಂತೆ ಸಂದೇಶ ಕಳುಹಿಸಿದ್ದ. ಆರೋಪಿ ನ್ಯಾಯಾಧೀಶನ ಹೆಸರು ಜೆಫ್ರಿ ಫರ್ಗುಸನ್. 72 ವರ್ಷದ ಇವರು ಪತ್ನಿಯನ್ನು ಕೊಂದಿದ್ದಾರೆ. ಇವರ ಮನೆಯಲ್ಲಿ ಪರಿಶೀಲನೆ ವೇಳೆ 47 ಬಂದೂಕುಗಳು, 26 ಸಾವಿರ ಸಜೀವ ಮದ್ದುಗುಂಡುಗಳು ಪತ್ತೆಯಾಗಿವೆ.
ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ನ್ಯಾಯಾಧೀಶನ ಪತ್ನಿ ಎದೆಗೆ ಗುಂಡೇಟು ಬಿದ್ದಿತ್ತು. ಈ ವೇಳೆ ಆರೋಪಿ ಕಂಠಪೂರ್ತಿ ಕುಡಿದಿದ್ದ ಎಂದು ತಿಳಿದುಬಂದಿದೆ.
ಆಗಸ್ಟ್ 3 ರಂದು ಫರ್ಗುಸನ್ ಮತ್ತು ಅವರ ಪತ್ನಿ ಶೆರಿಲ್ ಅನಾಹೈಮ್ ನಗರದ ರೆಸ್ಟೋರೆಂಟ್ ಒಂದರಲ್ಲಿ ತೀವ್ರವಾಗಿ ಜಗಳವಾಡಿದ್ದರು. ಆ ಜಗಳ ಮನೆಯಲ್ಲೂ ಮುಂದವರೆದಿತ್ತು. ಈ ವೇಳೆ ಆಕ್ರೋಶಗೊಂಡ ನ್ಯಾಯಾಧೀಶ ಪೊಲೀಸರಿಗೆ ಕರೆ ಮಾಡಿ, ನಂತರ ಪತ್ನಿಗೆ ಗುಂಡು ಹಾರಿಸಿದ್ದಾನೆ.