BengaluruPolitics

Exclusive; ಶೀಘ್ರದಲ್ಲೇ ನಿಗಮ-ಮಂಡಳಿಗಳಿಗೆ ನೇಮಕ – 70:30 ಅನುಪಾತದಲ್ಲಿ ಹಂಚಿಕೆ!

ಬೆಂಗಳೂರು; ವಿಧಾನಸಭಾ ಚುನಾವಣೆ ಸಮಯದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಕಾರ್ಯಕರ್ತರು, ಟಿಕೆಟ್‌ ಆಕಾಂಕ್ಷಿಗಳಿಗೆ ಸ್ಪಷ್ಟವಾಗಿ ಒಂದು ಮಾತನ್ನು ಹೇಳುತ್ತಿದ್ದರು. ಪ್ರತಿ ಕ್ಷೇತ್ರದಲ್ಲೂ ಹಲವಾರು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಎಲ್ಲರೂ ಸಮರ್ಥರಿದ್ದಾರೆ. ಆದ್ರೆ ಒಬ್ಬರಿಗೆ ಮಾತ್ರ ಟಿಕೆಟ್‌ ಕೊಡೋಕೆ ಸಾಧ್ಯ. ಉಳಿದವರು ಅಸಮಧಾನಗೊಳ್ಳುವ ಅಗತ್ಯವಿಲ್ಲ. ಅವರು ಪಕ್ಷಕ್ಕಾಗಿ ದುಡಿದರೆ ಅವರಿಗೆ ಮುಂದೆ ನಿಗಮ-ಮಂಡಳಿ, ಪಕ್ಷದ ಸಮಿತಿಗಳು ಸೇರಿದಂತೆ ಬೇರೆ ಕಡೆ ಸ್ಥಾನ ಕಲ್ಪಿಸಲಾಗುವುದು ಎಂದು ಭರವಸೆ ಕೊಟ್ಟಿದ್ದರು. ಡಿ.ಕೆ.ಶಿವಕುಮಾರ್‌ ಈ ಭರವಸೆಯಿಂದಾಗಿಯೇ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ನಲ್ಲಿ ಬಂಡಾಯ ಹೆಚ್ಚಾಗಿ ಕಂಡುಬರಲಿಲ್ಲ. ಟಿಕೆಟ್‌ ಸಿಗದಿದ್ದರೂ, ಬಹುತೇಕ ಟಿಕೆಟ್‌ ಆಕಾಂಕ್ಷಿಗಳು ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡಿದರು. ಅದರ ಪ್ರತಿಫಲದಿಂದ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಕ್ಕಿದೆ. ರಾಜ್ಯದಲ್ಲಿ ಸುಭದ್ರ ಕಾಂಗ್ರೆಸ್‌ ಸರ್ಕಾರ ಅಧಿಕಾರ ಹಿಡಿದಿದೆ.

ಇನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರ ಹಿಡಿದು ಎರಡು ತಿಂಗಳು ಕಳೆದಿವೆ. ಕೊಟ್ಟ ಐದು ಗ್ಯಾರೆಂಟಿಗಳಲ್ಲಿ ನಾಲ್ಕು ಈಗಾಗಲೇ ಜಾರಿಯಾಗಿವೆ. ಐದನೇ ಭರವಸೆ ಕೂಡಾ ಜಾರಿಯ ಹಂತದಲ್ಲಿವೆ. ಈ ನಡುವೆ ಚುನಾವಣೆ ಸಮಯದಲ್ಲಿ ಪಕ್ಷದ ಕಾರ್ಯಕರ್ತರಿಗೆ ಕೊಟ್ಟ ಭರವಸೆಯನ್ನೂ ಈಡೇರಿಸಬೇಕಾದ ಅನಿವಾರ್ಯತೆ ಕಾಂಗ್ರೆಸ್‌ ನಾಯಕರಿಗಿದೆ. ಯಾಕಂದ್ರೆ, ಲೋಕಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಇನ್ನು ಏಳೆಂಟು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಸಜ್ಜಾಗಬೇಕಿದೆ. ಈ ಹಿನ್ನೆಲೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿ, ಕಾರ್ಯಕರ್ತರ ನಂಬಿಕೆ ಉಳಿಸಿಕೊಂಡು ಲೋಕಸಭಾ ಚುನಾವಣೆಯಲ್ಲೂ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸೋದಕ್ಕೆ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. ಅದಕ್ಕಾಗಿ, ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ನೇಮಕಕ್ಕೆ ಕೈಹಾಕಿದೆ. ಶೀಘ್ರದಲ್ಲೇ ರಾಜ್ಯದಲ್ಲಿರುವ ಎಲ್ಲಾ 91 ನಿಗಮ ಮಂಡಳಿಗಳಿಗೂ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಕ ಮಾಡೋದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಈ ನಿಟ್ಟಿನಲ್ಲಿ ಹೈಕಮಾಂಡ್‌ ಜೊತೆ ಮಾತುಕತೆ ನಡೆಸಿದ್ದಾರೆ. 70:30ರ ಅನುಪಾತದಲ್ಲಿ ನಿಗಮ-ಮಂಡಳಿಗಳ ಉಪಾಧ್ಯಕ್ಷರ ನೇಮಕಕ್ಕೆ ಚಿಂತನೆ ನಡೆಸಲಾಗಿದೆ. ಅಂದಹಾಗೆ, ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗದವರು, ಲೋಕಸಭಾ ಚುನಾವಣೆಯಲ್ಲಿ ಸಾವಿರಾರು ಮತಗಳನ್ನು ತಂದುಕೊಡಬಲ್ಲವರು, ಪಕ್ಷಕ್ಕಾಗಿ ನಿಷ್ಠರಾಗಿ ದುಡಿಯುವ ಜನನಾಯಕರನ್ನು ಗುರುತಿಸಿ ಅವರಿಗೆ ಶೇಕಡಾ 70ರಷ್ಟು ನಿಗಮ-ಮಂಡಳಿಗಳ ಸ್ಥಾನಗಳನ್ನು ನೀಡಲು ಚಿಂತನೆ ನಡೆದಿದೆ. ಯಾಕಂದ್ರೆ, ಬಹುತೇಕರು ಟಿಕೆಟ್‌ ಸಿಗದೇ ಹೋದರೂ ಕೂಡಾ ವಿಧಾನಸಭಾ ಚುನಾವಣೆಯಲ್ಲಿ ಉತ್ಸಾಹದಿಂದ ಕೆಲಸ ಮಾಡಿ, ಬಂಡಾಯ ಉಂಟಾಗದಂತೆ ನೋಡಿಕೊಂಡಿದ್ದರು. ಅವರಿಗೆ ನಿಗಮ-ಮಂಡಳಿಗಳ ಮೂಲಕ ಸ್ಥಾನಮಾನಗಳನ್ನು ನೀಡಿದರೆ, ಲೋಕಸಭಾ ಚುನಾವಣೆಯಲ್ಲಿ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲಿದ್ದಾರೆ. ಹೀಗಾಗಿ ಅಂತಹವರಿಗೆ ಸ್ಥಾನಮಾನಗಳನ್ನು ನೀಡೋದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಇನ್ನು ಸಚಿವಾಕಾಂಕ್ಷಿಗಳು ಕೂಡಾ ಸಾಕಷ್ಟು ಸಂಖ್ಯೆಯಲ್ಲಿದ್ದರು. ಆದ್ರೆ ಎಲ್ಲರಿಗೂ ಸಚಿವ ಸ್ಥಾನ ನೀಡೋದಕ್ಕಾಗಿ ಆಗಿರಲಿಲ್ಲ. ಹೀಗಾಗಿ ಕೆಲವರನ್ನು ಸಂಧಾನದ ಮೂಲಕ ಸಮಾಧಾನಪಡಿಸಲಾಗಿತ್ತು. ಅಂತಹ ಶಾಸಕರನ್ನು ಶೇಕಡಾ 30ರಷ್ಟು ನಿಗಮ-ಮಂಡಳಿಗಳಿಗೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಹಲವಾರು ಶಾಸಕರು ಸಚಿವ ಸ್ಥಾನ ನಿಭಾಯಿಸಲು ಸಮರ್ಥರಿದ್ದಾರೆ. ಅಲ್ಲದೆ ಆಯಾ ಜಿಲ್ಲೆಗಳಲ್ಲಿ ಪ್ರಭಾವಿಗಳೂ ಆಗಿದ್ದಾರೆ. ಹೀಗಾಗಿ ಅವರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ ಕೊಟ್ಟರೆ, ಅವರಿಗೂ ಹಾಗೂ ಅವರ ಅಭಿಮಾನಿಗಳಿಗೂ ಸಂತೋಷವಾಗುತ್ತದೆ. ಆಗ ಪಕ್ಷ ಸಂಘಟನೆ ಇನ್ನಷ್ಟು ಸುಲಭವಾಗುತ್ತದೆ.

ಹೀಗಾಗಿ ಲೋಕಸಭಾ ಚುನಾವಣೆಯನ್ನು ಗಮದಲ್ಲಿಟ್ಟುಕೊಂಡು, ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲೋದಕ್ಕೆ ಏನೆಲ್ಲಾ ಕಸರತ್ತು ಮಾಡಬೇಕೋ ಅದೆಲ್ಲವನ್ನೂ ಕಾಂಗ್ರೆಸ್‌ ಮಾಡುತ್ತಿದೆ. ಅದಕ್ಕಾಗಿ, ನಾನಾ ತಂತ್ರಗಾರಿಕೆ ರೂಪಿಸುತ್ತಿದೆ. ಅದರಲ್ಲಿ ನಿಗಮ-ಮಂಡಳಿಗಳಿಗೆ ನೇಮಕವೂ ಕೂಡಾ ಒಂದು.

 

 

Share Post