Exclusive; ಕಾಂಗ್ರೆಸ್‌ನಲ್ಲಿ ಮೇಜರ್ ಸರ್ಜರಿಗೆ ಸಜ್ಜು – ಲೋಕಸಭಾ ಚುನಾವಣೆಗೆ ಡಿಕೆಶಿ ಮೆಗಾ ಪ್ಲ್ಯಾನ್
ಬೆಂಗಳೂರು; ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದ ತಂತ್ರಗಾರಿಕೆ ಫಲಪ್ರದವಾಗಿದ್ದಕ್ಕೆ ರಾಜ್ಯದಲ್ಲಿ ಸುಭದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದೀಗ ಕಾಂಗ್ರೆಸ್ ಲೋಕಸಭಾ ಚುನಾವಣೆ ಗೆಲ್ಲೋದಕ್ಕೆ ಮೆಗಾ ಪ್ಲ್ಯಾನ್ ಮಾಡುತ್ತಿದೆ. ಒಂದು ಕಡೆ ಸಮಾನ ಮನಸ್ಕ ಪಕ್ಷಗಳೆಲ್ಲಾ ಸೇರಿ INDIA ಎಂಬ ಒಕ್ಕೂಟ ರಚನೆ ಮಾಡಿಕೊಂಡಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದಲ್ಲಿ NDA ಸೋಲಿಸಲು INDIA ಸಜ್ಜಾಗುತ್ತಿದೆ. ಇನ್ನೊಂದೆಡೆ ಕರ್ನಾಟಕದಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲೋದಕ್ಕೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮೆಗಾ ಪ್ಲ್ಯಾನ್ ರೂಪಿಸಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ಕೆಪಿಸಿಸಿ, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಗಳಲ್ಲಿ ಮೇಜರ್ ಸರ್ಜರಿ ಮಾಡೋದಕ್ಕೆ ಡಿ.ಕೆ.ಶಿವಕುಮಾರ್ ಭಾರೀ ತಂತ್ರಗಾರಿಕೆ ರೂಪಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಇನ್ನು ಏಳೆಂಟು ತಿಂಗಳಷ್ಟೇ ಬಾಕಿ ಇದೆ. ಹೀಗಾಗಿ ಎಲ್ಲಾ ಪಕ್ಷಗಳೂ ಚುನಾವಣೆಗೆ ಸಜ್ಜಾಗುತ್ತಿವೆ. ಇತ್ತ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಗ್ನಿ ಪರೀಕ್ಷೆ ಇದೆ. ಯಾಕಂದ್ರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಒಂದೇ ಸ್ಥಾನ ಗೆದ್ದಿರೋದು. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿದರೆ, ಜೆಡಿಎಸ್ 1, ಬಿಜೆಪಿ ಬೆಂಬಲಿತ ಪಕ್ಷೇತರರು ಒಬ್ಬರು ಗೆದ್ದಿದ್ದಾರೆ. ಆದ್ರೆ ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲೋದಕ್ಕೆ ಕಾಂಗ್ರೆಸ್ ಸಜ್ಜಾಗುತ್ತಿದೆ. ಇದಕ್ಕಾಗಿ ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹಲವು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಅದರ ಮೊದಲ ಭಾಗವಾಗಿ ಕೆಪಿಸಿಸಿ, ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಗಳಲ್ಲಿ ಬದಲಾವಣೆ ತರಲು ಮುಂದಾಗಿದ್ದಾರೆ. ಎಲ್ಲಾ ಸಮಿತಿಗಳಲ್ಲೂ ಹೊಸಬರನ್ನು ಪ್ರತಿಷ್ಠಾಪಿಸಲು ಡಿ.ಕೆ.ಶಿವಕುಮಾರ್ ಚಿಂತನೆ ನಡೆಸಿದ್ದಾರೆ.
ಕೆಪಿಸಿಸಿಯಲ್ಲಿ ಐವರು ಕಾರ್ಯಾಧ್ಯಕ್ಷರಿದ್ದರು. ಅದರಲ್ಲಿ ಧ್ರವನಾರಾಯಣ್ ಅವರು ಅಕಾಲಿಕ ಮರಣವನ್ನಪ್ಪಿದ್ದಾರೆ. ಇನ್ನು ಉಳಿದವರು ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ ಹಾಗೂ ಈಶ್ವರ್ ಖಂಡ್ರೆ. ಇವರಲ್ಲಿ ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ ಹಾಗೂ ಈಶ್ವರ್ ಖಂಡ್ರೆ ಸಚಿವರಾಗಿದ್ದಾರೆ. ಹೀಗಾಗಿ ಕಾರ್ಯಾಧ್ಯಕ್ಷ ಸ್ಥಾನಗಳನ್ನು ಪಕ್ಷ ಸಂಘಟನೆ ಮಾಡುವ ಇತರೆ ಸಮರ್ಥರಿಗೆ ನೀಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಕೆಪಿಸಿಸಿಯ ಹಲವು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳನ್ನು ಕೂಡಾ ಬದಲಾವಣೆ ಮಾಡಿ, ಲೋಕಸಭಾ ಚುನಾವಣೆಗೆ ಸಮರ್ಥವಾಗಿ ಪಕ್ಷ ಸಂಘಟನೆ ಮಾಡುವ, ಮತದಾರರನ್ನು ಸೆಳೆಯುವ ಶಕ್ತಿ ಇರುವ, ಒಪ್ಪಿಸಿದ ಸ್ಥಾನಕ್ಕೆ ಶಕ್ತಿ ತುಂಬುವಂತಹವರನ್ನು ಆಯ್ಕೆ ಮಾಡೋದಕ್ಕೆ ಮುಂದಾಗಿದ್ದಾರೆ.
ಇನ್ನು ಕಾಂಗ್ರೆಸ್ ಜಿಲ್ಲಾ ಸಮಿತಿಗಳು, ಬ್ಲಾಕ್ ಕಾಂಗ್ರೆಸ್ ಸಮಿತಿಗಳಲ್ಲಿ ಕೂಡಾ ಬದಲಾವಣೆಯಾಗಲಿದೆ. ಹಲವು ಕಡೆ ಈಗಿರುವ ಪದಾಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ. ಇನ್ನುನ ಕೆಲವು ಕಡೆ ಇರುವ ಪದಾಧಿಕಾರಿಗಳಿಗಿಂತ ಸಮರ್ಥರಿದ್ದಾರೆ. ಇನ್ನೂ ಕೆಲವು ಕಡೆ ಈಗ ಇರುವ ಪದಾಧಿಕಾರಿಗಳಿಗೆ ಬೇರೆ ಜವಾಬ್ದಾರಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಎಲ್ಲಾ ಘಟಕಗಳನ್ನು ಬದಲಾವಣೆ ತಂದು ಪಕ್ಷ ಸಂಘಟನೆಗೆ ಚುರುಕು ಮೂಡಿಸುವ ಕೆಲಸ ನಡೆಯುತ್ತಿದೆ.
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲೋದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ಲ್ಯಾನ್ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಶ್ರಮ ವಹಿಸುವ, ಪಕ್ಷ ಸಂಘಟನೆ ಮಾಡುವ ಶಕ್ತಿ ಇರುವವರನ್ನು ಹುಡುಕಿ ಅವರಿಗೆ ಟಾಸ್ಕ್ ನೀಡಲಾಗುತ್ತಿದೆ. ಯುವಕರಿಗೆ, ಉತ್ಸಾಹಿಗಳಿಗೆ, ಜನ ಸಂಪರ್ಕ ಇರುವವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ.