ಗಂಡ-ಹೆಂಡಿರ ಜಗಳ ಕಾರು ಪಲ್ಟಿಯಾಗುವ ತನಕ..!
ಬೆಂಗಳೂರು; ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತೊಂದಿದೆ. ಆದ್ರೆ ಇಲ್ಲಿ ಗಂಡ-ಹೆಂಡಿರ ಜಗಳ ಕಾರು ಪಲ್ಟಿಯಾಗುವ ತನಕ ಹೋಗಿದೆ. ಕಳೆದ ರಾತ್ರಿ ಇಂತಹದ್ದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾರಿನಲ್ಲಿ ಹೋಗುತ್ತಿದ್ದಾಗ ಗಂಡ-ಹೆಂಡತಿ ಜಗಳ ಮಾಡಿಕೊಂಡಿದ್ದು, ಈ ವೇಳೆ ಹೆಂಡತಿ ಮಾಡಿದ ಎಡವಟ್ಟಿನಿಂದ ಕಾರು ಪಲ್ಟಿಯಾಗಿದೆ.
ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆ ಸಮೀಪವೇ ಈ ಘಟನೆ ನಡೆದಿದೆ. ಕೆಆರ್ ಮಾರ್ಕೆಟ್ ಕಡೆಯಿಂದ ಬರುತ್ತಿದ್ದ ಐ-20 ಕಾರಿನಲ್ಲಿ ಗಂಡ-ಹೆಂಡತಿ ಜಗಳವಾಡುತ್ತಾ ಬಂದಿದ್ದಾರೆ. ಈ ಮಾತಿನ ಚಕಮಕಿ ನಡುವೆ ತಾಳ್ಮೆ ಕಳೆದುಕೊಂಡ ಹೆಂಡತಿ ಕಾರಿನ ಸ್ಟಿಯರಿಂಗ್ ಜೋರಾಗಿ ಎಳೆದಿದ್ದಾರೆ. ಇದರಿಂದಾಗಿ ಕಾರು ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.
ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ದಂಪತಿಯನ್ನು ರಕ್ಷಣೆ ಮಾಡಿದ್ದಾರೆ. ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕುಡಿದು ವಾಹನ ಓಡಿಸುತ್ತಿದ್ದರಾ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.