ರಾಮನಾಥಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ನರೇಂದ್ರ ಮೋದಿ..?
ನವದೆಹಲಿ; ಲೋಕಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತದ ಮೇಲೆ ಕಣ್ಣಿಟ್ಟಿದ್ದಾರೆ. ಮೋದಯವರು ಈ ಬಾರಿ ತಮಿಳುನಾಡಿನಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ರಾಮನಾಥಪುರಂ ಲೋಕಸಭಾ ಕ್ಷೇತ್ರದಿಂದ ಕೂಡಾ ಮೋದಿ ಸ್ಪರ್ಧೆ ಮಾಡಲು ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತಿದೆ.
ಜುಲೈ 7ರಂದು ಹೈದರಾಬಾದ್‌ನಲ್ಲಿ ದಕ್ಷಿಣ ಭಾರತದ ರಾಜ್ಯಗಳ ಬಿಜೆಪಿ ನಾಯಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಮೋದಿ ಸ್ಪರ್ಧೆ ಬಗ್ಗೆ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮೋದಿಯವರು ರಾಮನಾಥಪುರಂನಿಂದ ಸ್ಪರ್ಧೆ ಮಾಡಬಹುದೇ ಎಂಬ ಪ್ರಶ್ನೆ ಎದ್ದಿದೆ. ಈ ಮೊದಲು ಮೋದಿಯವರು ಕನ್ಯಾಕುಮಾರಿಯಿಂದ ಲೋಕಸಭೆಗೆ ಸ್ಪರ್ಧೆ ಮಾಡಬಹುದು ಎಂಬ ಸುದ್ದಿಗಳು ಹರಿದಾಡಿದ್ದವು. ಆದ್ರೆ ಇದೀಗ ರಾಮನಾಥಪುರಂನಿಂದ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಕನಿಷ್ಠ 50 ಸ್ಥಾನಗಳನ್ನಾದರೂ ಗೆಲ್ಲಬೇಕು ಎಂಬ ಪಣ ತೊಟ್ಟಿದೆ. ಇನ್ನೊಂದೆಡೆ ಸದ್ಯಕ್ಕೆ ತಮಿಳುನಾಡಿನಲ್ಲಿ ಎಐಎಡಿಎಂಕೆ ನಾಯಕತ್ವ ದುರ್ಬಲಗೊಳ್ಳುತ್ತಿರುವುದರಿಂದ ಅದರ ಲಾಭ ಪಡೆದು ಬಿಜೆಪಿ ಶಕ್ತಿ ಹೆಚ್ಚಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಮೋದಿ ಬಂದು ತಮಿಳುನಾಡಿನಲ್ಲಿ ನಿಂತರೆ ಬಿಜೆಪಿಗೆ ಮತ್ತಷ್ಟು ಬಲ ಬರಲಿದೆ ಎಂಬ ಲೆಕ್ಕಾಚಾರಗಳಿವೆ.
ಇನ್ನೊಂದೆಡೆ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಮನಾಥಪುರಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಒಳ್ಳೆಯ ಮತಗಳು ಬಂದಿದ್ದವು. ಆಗ ಬಿಜೆಪಿ ಅಭ್ಯರ್ಥಿ 3 ಲಕ್ಷ 43 ಸಾವಿರ ಮತಗಳನ್ನು ಪಡೆದಿದ್ದರೆ, ಗೆದ್ದ ಅಭ್ಯರ್ಥಿ ಮುಸ್ಲಿಂ ಲೀಗ್‌ನ ನವಸ್ಕಾನಿ 4 ಲಕ್ಷದ 70 ಸಾವಿರ ಮತಗಳು ಪಡೆದಿದ್ದರು. ಹೀಗಾಗಿ ಇಲ್ಲಿ ಮೋದಿ ಸ್ಪರ್ಧೆ ಮಾಡಿದರೆ ಗೆಲ್ಲಬಹುದು, ಜೊತೆಗೆ ಇತರೆ ಕ್ಷೇತ್ರಗಳ ಅಭ್ಯರ್ಥಿಗಳಿಗೂ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.