ಬಡ ಮಹಿಳೆಗೆ ತಾವೇ ಶಸ್ತ್ರಚಿಕಿತ್ಸೆ ಮಾಡಿದ ಶಾಸಕ ಡಾ.ರಂಗನಾಥ್
ತುಮಕೂರು; ಅಪಘಾತಗಳಾದಾಗ ಜನಪ್ರತಿನಿಧಿಗಳೇ ಮುಂದೆ ನಿಂತು ಗಾಯಾಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ತಮ್ಮ ಕಾರಿನಲ್ಲೇ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ನೋಡಿದ್ದೇವೆ. ಇಲ್ಲಿ ಶಾಸಕರೇ ವೈದ್ಯರಾಗಿದ್ದಾರೆ. ಮಹಿಳೆಗೆ ಶಾಸಕರೇ ಶಸ್ತ್ರಚಿಕಿತ್ಸೆ ಕೂಡಾ ಮಾಡಿದ್ದಾರೆ.
ಹೌದು, ತಮಕೂರು ಜಿಲ್ಲೆ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಬಡ ಮಹಿಳೆಯರೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶಾಸಕರ ಬಳಿ ಬಡ ಮಹಿಳೆಯೊಬ್ಬರು ಸಮಸ್ಯೆ ಹೇಳಿಕೊಳ್ಳಲು ಬಂದಿದ್ದರು. ಕುಣಿಗಲ್ ತಾಲ್ಲೂಕಿನ ಕುದೂರು ಗ್ರಾಮದ ಆಶಾಸ ಎಂಬ ಮಹಿಳೆ ಕೀಲು ಸಮಸ್ಯೆಯಿಂದ ವಿಪರೀತ ನೋವು ಅನುಭವಿಸುತ್ತಿದ್ದರು. ಹೀಗಾಗಿ, ಇದರ ಶಸ್ತ್ರಚಿಕಿತ್ಸೆಗೆ ಶಾಸಕರಿಂದ ಸಹಾಯ ಸಿಗಬಹುದು ಎಂದು ಮಹಿಳೆ ಬಂದಿದ್ದರು.
ಆಗ ಶಾಸಕ ಡಾ.ರಂಗನಾಥ್ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿದ್ದಾರೆ. ನಂತರ ಶಾಸಕರೇ ಸ್ವತಃ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಮಹಿಳೆ ಹತ್ತು ವರ್ಷಗಳ ಹಿಂದೆ ಯಶಸ್ವಿನಿ ಯೋಜನೆಯಡಿ ಕೀಲು ಆಪರೇಷನ್ ಮಾಡಿಸಿಕೊಂಡಿದ್ದರು. ಆದ್ರೆ ಈಗ ಮತ್ತೆ ನೋವು ವಿಪರೀತವಾಗಿತ್ತು. ಆದ್ರೆ ಸರ್ಕಾರಿ ಯೋಜನೆಯಲ್ಲಿ ಒಂದೇ ಕಾಯಿಲೆಗೆ ಎರಡು ಬಾರಿ ಸರ್ಜರಿ ಮಾಡಿಸೋದಕ್ಕೆ ಅವಕಾಶವಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದರೆ 4-5ಲಕ್ಷ ರೂಪಾಯಿ ಖರ್ಚಾಗುತ್ತಿತ್ತು. ಇದನ್ನು ತಿಳಿದ ಶಾಸಕರು ತಾವೇ ಶಸ್ತ್ರಚಿಕಿತ್ಸೆ ಮಾಡಿ, ಮಹಿಳೆ ಮುಖದಲ್ಲಿ ನೆಮ್ಮದಿ ತರಿಸಿದ್ದಾರೆ.
ಇನ್ನು ಶಾಸಕ ರಂಗನಾಥ್ ಅವರು ಅರ್ಥೋಪೆಡಿಕ್ ಸರ್ಜನ್ ಆಗಿದ್ದಾರೆ. ಹೀಗಾಗಿ ಅವರು ಇದೇ ರೀತಿ ಕೀಲು ನೋವು ಅನುಭವಿಸುತ್ತಿರುವ ಕುಣಿಗಲ್ ಕ್ಷೇತ್ರದ ಇನ್ನೂ 23 ಮಹಿಳೆಯರಿಗೆ ತಾವೇ ಶಸ್ತ್ರಚಿಕಿತ್ಸೆ ಮಾಡಲು ನಿರ್ಧಾರ ಮಾಡಿದ್ದಾರೆ.