BengaluruPolitics

ಜೂನ್‌ 20ಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಬೃಹತ್‌ ಪ್ರತಿಭಟನೆ – ಡಿ.ಕೆ.ಶಿವಕುಮಾರ್‌

ಬೆಂಗಳೂರು; ಚುನಾವಣೆ ಸಮಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಬಿಜೆಪಿಯನ್ನು ಗೆಲ್ಲಿಸದಿದ್ದರೆ ರಾಜ್ಯಕ್ಕೆ ಕೇಂದ್ರ ಯೋಜನೆಗಳನ್ನು ಕಟ್‌ ಮಾಡಲಾಗುತ್ತದೆ ಎಂದು ರಾಜ್ಯ ಮತದಾರರನ್ನು ಬೆದರಿಸಿದ್ದರು. ಅದರಂತೆ ಕೇಂದ್ರ ಸರ್ಕಾರ ನಡೆದುಕೊಂಡಿದೆ. ಅನ್ನಭಾಗ್ಯಕ್ಕೆ ಹಣ ತೆಗೆದುಕೊಂಡು ಅಕ್ಕಿ ಕೊಡಿ ಎಂದರೂ ಅವರು ಕೊಡುತ್ತಿಲ್ಲ. ಈ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದೆ. ಇದರ ವಿರುದ್ಧ ನಾನು ಜೂನ್‌ 20 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್‌ ಅವರು ಕೇಂದ್ರ ಸರ್ಕಾರದ ದೋರಣೆಯನ್ನು ಖಂಡಿಸಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನೂ ಸಮಾನವಾಗಿ ನೋಡಬೇಕು. ಆದ್ರೆ, ಕೇಂದ್ರ ಸರ್ಕಾರ, ರಾಜ್ಯ ಬಡವರ ಹೊಟ್ಟೆಗೆ ಹೊಡೆಯುತ್ತಿದೆ. ಇದನ್ನು ನಾವೆಲ್ಲರೂ ಖಂಡಿಸಲೇಬೇಕಿದೆ. ಇದಕ್ಕಾಗಿ ಜೂನ್‌ 20ರಂದು ಬೆಳಗ್ಗೆ 11 ಗಂಟೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು. ಕೇಂದ್ರದವರು ಅಕ್ಕಿ ಕೊಡದೇ ಹೋದರೂ ನಾವು ಜನರಿಗೆ ಅಕ್ಕಿ ಪೂರೈಸುತ್ತೇವೆ. ಅಕ್ಕಿ ಹೆಚ್ಚು ಬೆಳೆಯುವ ರಾಜ್ಯಗಳ ಜೊತೆ ಮಾತನಾಡುತ್ತಿದ್ದೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರ ದೇಶದ ಉದ್ದಗಲಕ್ಕೂ ಆಹಾರ ಪೂರೈಕೆ ಮಾಡೋದಕ್ಕೆ ಅವಕಾಶ ಇದೆ. ಅವರು ಒಂದು ರೇಟ್‌ ಫಿಕ್ಸ್‌ ಮಾಡಿದ್ದಾರೆ. ಅದನ್ನು ಕೊಡೋದಕ್ಕೆ ನಾವು ರೆಡಿ ಇದ್ದೇವೆ. ನಾವು ಫ್ರೀಯಾಗಿ ಕೇಳುತ್ತಿಲ್ಲ. ಅವರು ಫಿಕ್ಸ್‌ ಮಾಡಿರುವ ಕ್ವಿಂಟಾಲ್‌ಗೆ 3400 ರೂಪಾಯಿ ನೀಡೋದಕ್ಕೆ ನಾವು ರೆಡಿ ಇದ್ದೇವೆ. ಆದ್ರೂ ಅವರು ಕೊಡುತ್ತಿಲ್ಲ. ಅಕ್ಕಿ ದಾಸ್ತಾನಿದ್ದರೂ ಅವರು ಅಕ್ಕಿ ಕೊಡೋದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಆರೋಪಿಸಿದರು.
ಅವರತ್ರ ಅಕ್ಕಿ ಇದ್ದಿದ್ದಕ್ಕೆ ನಾವು ಕೇಳಿದ್ದೇವೆ

ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಮ್ಮ ಯೋಜನೆ ಜಾರಿಯಾಗದಂತೆ ಮಾಡಲು ಬಿಜೆಪಿ ಹುನ್ನಾರ ಮಾಡಿದೆ. ರಾಜ್ಯದಲ್ಲಿ ಯಾವ ಬಡವನೂ ಹಸಿವಿನಿಂದ ಬಳಲಬಾರದು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿ ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತಿದ್ದೇವೆ. ಫುಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಅವರು ಒಂದು ಪದ್ಧತಿಯಲ್ಲಿ ಅಕ್ಕಿ ಸಂಗ್ರಹ ಮಾಡುತ್ತಾರೆ. 34 ರೂಪಾಯಿಗೆ ಒಂದು ಕೆಜಿ ತೆಗೆದುಕೊಂಡು ಕೊಡಿ ಎಂದು ಕೇಳಿದ್ದೇವೆ. ಅದಕ್ಕೆ ಅವರು ಒಪ್ಪಿಕೊಂಡು ಜೂನ್‌ 12ರಂದು ನಮಗೆ ಪತ್ರ ಬರೆದಿದ್ದರು. ಅನಂತರ ಜೂನ್‌ 13 ರಂದು ಅಕ್ಕಿ ಕೊಡೋದಿಲ್ಲ ಎಂದು ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಆರೋಪಿಸಿದರು.

ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಬಿಜೆಪಿಯವರು ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ರಾಜ್ಯದ ಜನ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿದ್ದಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಅವರ ವಿರುದ್ಧ ಬಿಜೆಪಿ ಸೇಡು ತೀರಿಸಿಕೊಳ್ಳಲು ಹೊರಟಿದೆ ಎಂದು ಡಿ.ಕೆ.ಶಿವಕುಮಾರ್‌ ದೂರಿದರು.

Share Post