ಹೆರಿಗೆಗೆ ಸೈಕಲ್ ನಲ್ಲಿ ಪ್ರಯಾಣಿಸಿದ ಸಂಸದೆ; ಒಂದೇ ಗಂಟೆಯಲ್ಲಿ ಮಗು ಜನನ
ನ್ಯೂಜಿಲೆಂಡ್ನ ಸಂಸದೆಯೊಬ್ಬರು ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಸೈಕಲ್ ನಲ್ಲೇ ಆಸ್ಪತ್ರೆಗೆ ಹೋಗಿ, ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾರೆ. ಈ ಬಗ್ಗೆ ಅವರೇ ಫೇಸ್ಬುಕ್ನಲ್ಲಿ ಫೋಟೋಗಳನ್ನು ಹಂಚಿಕೊಂಡು ಪ್ರಪಂಚದಾದ್ಯಂತ ಈ ಫೋಟೊಗಳು ವೈರಲ್ ಆಗಿವೆ.
ನ್ಯೂಜಿಲೆಂಡ್ ಸಂಸದೆ ಜೂಲಿ ಅನ್ನೆ ಅವರೇ ಸೈಕಲ್ನಲ್ಲಿ ಹೋಗಿ ಮಗುವಿಗೆ ಜನ್ಮ ನೀಡಿದವರು. ಜೂಲಿ ರಾಜಕಾರಣಿಯಾಗುವುದಕ್ಕೂ ಮೊದಲು ಸೈಕ್ಲಿಸ್ಟ್ ಆಗಿದ್ದರು. ಹೀಗಾಗಿಯೇ ಏನೋ ಮಧ್ಯರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಾಗ, ಸೈಕಲ್ ಏರಿ ಆಸ್ಪತ್ರೆಗೆ ಹೊರಟಿದ್ದಾರೆ. ಸುಮಾರು ೨ ಗಂಟೆ ರಾತ್ರಿಯಲ್ಲಿ ಇಬ್ಬರೇ ಸೈಕಲ್ ಏರಿ ಹೊರಟ ಜೂಲಿ, ಸೇಫಾಗಿ ಆಸ್ಪತ್ರೆ ಸೇರಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾದ ಒಂದೇ ತಾಸಿನಲ್ಲಿ ಸಾಮಾನ್ಯ ಹೆರಿಗೆಯಾಗಿದೆ.
ಈ ಬಗ್ಗೆ ಜೂಲಿ ಫೇಸ್ಬುಕ್ನಲ್ಲಿ ಫೋಟೋಗಳೊಂದಿಗೆ ಬರೆದುಕೊಂಡಿದ್ದಾರೆ. ಇಂದು ಮುಂಜಾನೆ 3.04ಗಂಟೆ ಹೊತ್ತಿಗೆ ನಮ್ಮ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರ ಆಗಮನವಾಯಿತು. ಈ ಸಲ ಹೆರಿಗೆಗೆ ಸೈಕಲ್ ನಲ್ಲಿ ಬಂದು ಅಡ್ಮಿಟ್ ಆಗುವ ಯೋಜನೆ ಇರಲಿಲ್ಲ. ಆದರೆ ಕೊನೆಯಲ್ಲಿ ಹಾಗೆಯೇ ಬರುವಂತಾಯ್ತು ಎಂದಿದ್ದಾರೆ. ಹಾಗೆಯೇ, ನನಗೆ 2 ಗಂಟೆ ಹೊತ್ತಿಗೆ ಹೆರಿಗೆ ನೋವು ಬರಲು ಶುರುವಾಯಿತು. ಆದರೆ ಅದು ತೀವ್ರವಾಗಿರಲಿಲ್ಲ. 2-3 ನಿಮಿಷಕ್ಕೊಮ್ಮೆ ಬಿಟ್ಟುಬಿಟ್ಟು ಬರುತ್ತಿತ್ತು. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ತೀವ್ರವಾಯಿತು. ಒಂದು ತಾಸಿನ ಬಳಿಕ ಮಗು ಹುಟ್ಟಿದೆ ಎಂದು ಹೇಳಿಕೊಂಡಿದ್ದಾರೆ. 2018ರಲ್ಲೂ ಇವರು ಸೈಕಲ್ನಲ್ಲೇ ಹೋಗಿ ಮೊದಲ ಮಗುವಿಗೆ ಜನ್ಮ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.