ಲಸಿಕೆ ಹಾಕಲು ಬಂದಾಗ ಮೇಲ್ಛಾವಣಿ ಏರಿದ ವ್ಯಕ್ತಿ
ಕೊಪ್ಪಳ: ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಹೆದರಿ ವ್ಯಕ್ತಿಯೊಬ್ಬ ಮನೆಯ ಮೇಲ್ಛಾವಣಿ ಏರಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕಾರಟಗಿ ತಾಲ್ಲೂಕಿನ ಬೂದಗುಂಪಾ ಗ್ರಾಮ ಹುಚ್ಚಪ್ಪ ಮಾಳಗಿ ಮನೆ ಮೇಲ್ಛಾವಣಿ ಏರಿದ ವ್ಯಕ್ತಿ. ರಾಜ್ಯದಲ್ಲಿ ಮತ್ತೆ ಕೊರೋನಾ ಹಾವಳಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನ ಚುರುಕುಗೊಳಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಅಧಿಕಾರಿಗಳು ಹಳ್ಳಿ ಹಳ್ಳಿಗೂ ಭೇಟಿ ನೀಡಿ, ಲಸಿಕೆ ಹಾಕಿಕೊಳ್ಳದವರನ್ನು ಗುರುತಿಸಿ, ಲಸಿಕೆ ಹಾಕುತ್ತಿದ್ದಾರೆ. ಕೆಲವರು ಲಸಿಕೆಗೆ ಭಯ ಬಿದ್ದು ಓಡಿಹೋಗುತ್ತಿದ್ದಾರೆ.
ಬೂದಗುಂಪಾ ಗ್ರಾಮದಲ್ಲೂ ಕೂಡಾ ಇದೇ ರೀತಿ ನಡೆದಿದೆ. ಇಲ್ಲಿನ ಹುಚ್ಚಪ್ಪ ಮಾಳಗಿ ಎಂಬ ವ್ಯಕ್ತಿ ಲಸಿಕೆ ಹಾಕಿಕೊಳ್ಳಲು ಹೆದರಿ ಮನೆ ಮೇಲ್ಛಾವಣಿ ಏರಿದ್ದರು. ಇದನ್ನು ಕಂಡ ಅಧಿಕಾರಿಗಳು ಏಣಿ ಬಳಸಿ ಅವರೂ ಮೇಲ್ಛಾವಣಿ ಏರಿದರು. ಹುಚ್ಚಪ್ಪನ ಮನವೊಲಿಸಿ ಕೆಳಗಿಳಿಸಿ ತಂದರು. ಲಸಿಕೆ ಬಗ್ಗೆ ಅರಿವು ಮೂಡಿಸಿ, ಅವರಿಗೆ ಲಸಿಕೆ ಹಾಕಲಾಯಿತು.