BengaluruCrime

ಉನ್ನತ ಅಧಿಕಾರಿ ಎಂದು ನಂಬಿಸಿ ವಂಚನೆ; ಆರೋಪಿ ಅರೆಸ್ಟ್‌

ಬೆಂಗಳೂರು: ಸರ್ವೆ ಇಲಾಖೆಯ ಡೆಪ್ಯೂಟಿ ಕಮೀಷನರ್‌ ಹೆಸರಿನಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ ಜನರಿಗೆ ವಂಚನೆ ಮಾಡುತ್ತಿದ್ದ ಉಡುಪಿ ಮೂಲದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಉಡುಪಿಯ ಕುಂದಾಪುರ ತಾಲ್ಲೂಕಿನ ಬಸ್ರೂರು ಗ್ರಾಮದವನು ಎಂದು ಗುರುತಿಸಲಾಗಿದೆ.

ಆರೋಪಿಯು ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದು, ತಾನು ಸರ್ವೆ ಇಲಾಖೆ ಡೆಪ್ಯೂಟಿ ಕಮೀಷನರ್‌ ಎಂದು ಹೇಳಿಕೊಂಡಿದ್ದ. ಅದಕ್ಕಾಗಿ ಒಂದು ನಕಲಿ ಗುರುತಿನ ಚೀಟಿ ತಯಾರಿಸಿಕೊಂಡಿದ್ದ ಆತ, ಅದನ್ನು ತೋರಿಸಿ ಜನರನ್ನು ಯಾಮಾರಿಸುತ್ತಿದ್ದ. ಸರ್ವೇ ಇಲಾಖೆ ಹಾಗೂ ಇತರೆ ಹಲವು ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಕೊಡಿಸುತ್ತೇನೆಂದು ನಿರುದ್ಯೋಗಿಗಳಿಗೆ ನಂಬಿಸುತ್ತಿದ್ದ ಈತ, ಅದಕ್ಕಾಗಿ 8 ರಿಂದ 10 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ. ಅನಂತರ ಕೈಗೆ ಸಿಗದೇ ಎಸ್ಕೇಪ್‌ ಆಗುತ್ತಿದ್ದ.

ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಸ್ವಂತ ಊರಿನಲ್ಲಿ ಒಂದು ಮನೆ, ತುಮಕೂರಿನಲ್ಲಿ ಒಂದು ಹೋಟೆಲ್‌, ಬೆಂಗಳೂರಿನ ಕೆಂಗೇರಿಯಲ್ಲಿ ಒಂದು ಪ್ಲ್ಯಾಟ್‌ ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ಹೊಂದಿದ್ದಾನೆಂದು ತಿಳಿದುಬಂದಿದೆ.

Share Post