ಯುವತಿ ಮೇಲೆ ಆಸಿಡ್ ಎರಚಿದ ಪ್ರಕರಣ; ಆರೋಪಿ ನಾಗೇಶ್ ಕೊನೆಗೂ ಅರೆಸ್ಟ್
ಬೆಂಗಳೂರು: ಯುವತಿ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದ ಪಾಗಲ್ ಪ್ರೇಮಿ ನಾಗೇಶ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ. 16 ದಿನಗಳ ಸತತ ಹುಡುಕಾಟದ ನಂತರ ಆರೋಪಿ ತಮಿಳುನಾಡಿನಲ್ಲಿ ಸಿಕ್ಕಿಬಿದ್ದಿದ್ದಾರೆ. ತಿರುವಣ್ಣಾಮಲೈನಲ್ಲಿ ಆರೋಪಿ ನಾಗೇಶ್ ಪತ್ತೆಯಾಗಿದ್ದು, ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆತರುತ್ತಿದ್ದಾರೆ.
ಏಪ್ರಿಲ್ 28ರಂದು ಕೆಲಸಕ್ಕೆ ಹೋಗಿದ್ದ ಯುವತಿ ಮೇಲೆ ನಾಗೇಶ್ ಆಸಿಡ್ ಎರಚಿ ಪರಾರಿಯಾಗಿದ್ದ. ಅನಂತರ ಸಣ್ಣ ಸುಳಿವೂ ಬಿಟ್ಟುಕೊಡದೇ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಆತನನ್ನು ಹಿಡಿಯಲು ಪೊಲೀಸರು ಹರಸಾಹಸಪಡುತ್ತಿದ್ದರು. ಹಲವು ತಂಡಗಳನ್ನು ರಚಿಸಿ, ನೆರೆ ರಾಜ್ಯಗಳ ದೇವಸ್ಥಾನಗಳನ್ನೆಲ್ಲಾ ತಡಕಾಡಲಾಗಿತ್ತು. ಆದ್ರೆ, ಆರೋಪಿ ನಾಗೇಶ್ನ ಸುಳಿವು ಸಿಕ್ಕಿರಲಿಲ್ಲ. ಕೊನೆಗೂ ಆರೋಪಿ ನಾಗೇಶ್ ತಿರುವಣ್ಣಾಮಲೈನಲ್ಲಿ ಪತ್ತೆಯಾಗಿದ್ದಾನೆ.
ಆಸಿಡ್ ಎರಚಿದ ಮೇಲೆ ನೇರವಾಗಿ ಆರೋಪಿ ನಾಗೇಶ್ ತಮಿಳುನಾಡಿಗೆ ತೆರಳಿದ್ದ. ಮೊದಲೇ ಪ್ಲಾನ್ ಮಾಡಿಕೊಂಡಿದ್ದನೋ ಏನೋ ಆತ ರಮಣ ಆಶ್ರಮದಲ್ಲಿ ಸೇರಿಕೊಂಡಿದ್ದ. ಕಾವಿ ಧರಿಸಿ ಅಶ್ರಮಕ್ಕೆ ಬಂದಿದ್ದ ಆತ, ತಾನು ಸ್ವಾಮೀಜಿ ಎಂದು ಹೇಳಿಕೊಂಡಿದ್ದನಂತೆ.