ಮತ್ತೆ ಕ್ಯಾತೆ ತೆಗೆದ್ರಾ ಸಚಿವ ಎಂ.ಬಿ.ಪಾಟೀಲ್..?; ಜಲಸಂಪನ್ಮೂಲ ಖಾತೆ ಪ್ರಸ್ತಾಪಿಸಿದ್ದೇಕೆ..?
ಬೆಂಗಳೂರು; ಕಾಂಗ್ರೆಸ್ ಸರ್ಕಾರ ಬಂದು ಇನ್ನೂ ಒಂದು ತಿಂಗಳೂ ಮುಗಿದಿಲ್ಲ. ಆಗಲೇ ಖಾತೆ ಕ್ಯಾತೆ ಶುರುವಾಗಿದೆ. ಐದು ವರ್ಷ ಪೂರ್ತಿ ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ ಎಂದಿದ್ದ ಸಚಿವ ಎಂ.ಬಿ.ಪಾಟೀಲ್ ಈಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಕೌಂಟರ್ ಕೊಟ್ಟಂತೆ ಕಾಣುತ್ತಿದೆ. ನಿನ್ನೆ ವಿಜಯಪುರದಲ್ಲಿ ಮಾತನಾಡಿರುವ ಎಂ.ಬಿ.ಪಾಟೀಲ್, ನಾನು ಜಲಸಂಪನ್ಮೂಲ ಖಾತೆಯನ್ನು ಬಯಸಿದ್ದೆ. ಆದ್ರೆ ಸಿದ್ದರಾಮಯ್ಯ ಅವರ ಮನವಿಗೆ ಓಗೊಟ್ಟು ಕೈಗಾರಿಕಾ ಖಾತೆ ಒಪ್ಪಿಕೊಳ್ಳಬೇಕಾಯಿತು ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.
ಈ ಹಿಂದೆ ಸುತ್ತೂರಿನಲ್ಲಿ ಮಾತನಾಡಿದ್ದ ಸಚಿವ ಎಂ.ಬಿ.ಪಾಟೀಲ್, ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ನಲ್ಲಿ ಮಾತುಕತೆಯೇ ಆಗಿಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶಗೊಂಡಿದ್ದರು. ಹೈಕಮಾಂಡ್ಗೆ ಈ ಬಗ್ಗೆ ಮಾಹಿತಿಯನ್ನೂ ರವಾನಿಸಿದ್ದರು. ಈ ನಡುವೆ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಕೂಡಾ ಎಂ.ಬಿ.ಪಾಟೀಲರಿಗೆ ಎಚ್ಚರಿಕೆ ನೀಡಿದ್ದರು. ಈ ನಡುವೆಯೂ ಎಂ.ಬಿ.ಪಾಟೀಲರು ನೀರಾವರಿ ಖಾತೆಯನ್ನು ಕಳೆದುಕೊಂಡ ಬಗ್ಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರನ್ನು ಕೆರಳಿಸುವ ರೀತಿಯಲ್ಲಿ ಮಾತನಾಡಿದಂತೆ ಕಾಣುತ್ತಿದೆ.
ವಿಜಯಪುರದಲ್ಲಿ ಮಾತನಾಡಿರುವ ಎಂ.ಬಿ.ಪಾಟೀಲರು, ನನಗೆ ಈ ಬಾರಿಯೂ ನೀರಾವರಿ ಸಚಿವನಾಗುವ ಆಸೆ ಇತ್ತು. ಆದ್ರೆ ರಾಜಕೀಯದಿಂದಾಗಿ ಆ ಖಾತೆ ಸಿಗಲಿಲ್ಲ. ಸಿದ್ದರಾಮಯ್ಯ ಅವರು ಬೇರೆ ಖಾತೆ ವಹಿಸಿಕೊಳ್ಳುವಂತೆ ಸಲಹೆ ನೀಡಿದ್ದರಿಂದ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಖಾತೆ ತೆಗೆದುಕೊಂಡೆ ಅಂತ ಹೇಳಿದ್ದಾರೆ. ಸದ್ಯ ನೀರಾವರಿ ಖಾತೆಯನ್ನು ಡಿ.ಕೆ.ಶಿವಕುಮಾರ್ ನಿಭಾಯಿಸುತ್ತಿದ್ದಾರೆ. ಇದೇ ಅಸಮಾಧಾನಕ್ಕೆ ಈ ಮಾತುನ್ನು ಎಂ.ಬಿ.ಪಾಟೀಲರು ಹೇಳಿದ್ದಾರೆ ಎನ್ನಲಾಗುತ್ತಿದೆ.