BengaluruCrime

ಕೊಂದು ದೇಹವನ್ನು ಕತ್ತರಿಸೋದು ಏಕೆ..?; ತಪ್ಪಿಸಿಕೊಳ್ಳಲು ಇಂಟರ್‌ನೆಟ್‌ ಮೊರೆ ಹೋಗ್ತಿದ್ದಾರಾ..?

ಬೆಂಗಳೂರು; ದೆಹಲಿಯಲ್ಲಿ ಶ್ರದ್ಧಾವಾಕರ್‌ ಕೊಲೆ ನಂತರ ಅಂತಹದ್ದೇ ಹಲವು ಕೃತ್ಯಗಳು ಮರುಕಳಿಸುತ್ತಿವೆ.. ಕೊಲೆ ಮಾಡಿದ ನಂತರ ಕೊಲೆಗಾರರು ದೇಹವನ್ನು ತುಂಡು ತುಂಡು ಮಾಡುತ್ತಿದ್ದಾರೆ.. ಇಂತಹ ಭೀಕರ ಕೃತ್ಯಗಳು ಈ ಹಿಂದೆ ನಡೆದಿದ್ದರೂ ಕೂಡಾ ಇತ್ತೀಚೆಗೆ ತುಂಬಾನೇ ಹೆಚ್ಚಾಗುತ್ತಿವೆ.. ಅಷ್ಟಕ್ಕೂ ಕೊಲೆಗಾರರೆಲ್ಲಾ ದೇಹವನ್ನು ತುಂಡು ಮಾಡುವ ರಾಕ್ಷಸಿ ವರ್ತನೆ ತೋರುತ್ತಿರುವುದು ಯಾಕೆ..? ಇದಕ್ಕೆ ಪ್ರೇರಣೆ ನೀಡ್ತಿರೋರಾದ್ರೂ ಯಾರು..? ಈ ಪ್ರಶ್ನೆಗಳು ನಾವು ಉತ್ತರ ಕಂಡುಕೊಳ್ಳಬೇಕಿದೆ… ಯಾಕಂದ್ರೆ ನಮ್ಮ ನಡುವೆ ಸೈಕೋ ಕಿಲ್ಲರ್‌ಗಳು ಹೆಚ್ಚಾಗುತ್ತಿದ್ದಾರೆ…

ನಿಮಗೆ ನೆನಪಿರಬಹುದು… ನೆನಪಿರುವುದೇನು ಮನುಷ್ಯತ್ವ ಇರುವವರು ಇಂತಹ ಭೀಭತ್ಸ ಕೃತ್ಯವನ್ನು ಎಂದೂ ಮರೆಯೋದಕ್ಕೆ ಸಾಧ್ಯವೇ ಇಲ್ಲ.. ಇಡೀ ಮನುಕುಲವೇ ತಲೆತಗ್ಗುವಂತಹ ಘಟನೆ ಅದು… ಅದು ಬೇರಾವುದೂ ಅಲ್ಲ… ದೆಹಲಿಯಲ್ಲಿ ಭೀಕರವಾಗಿ ಕೊಲೆಯಾಗಿ ಹೋದ ಶ್ರದ್ಧಾ ವಾಕರ್‌ ಕೊಲೆ ಪ್ರಕರಣ…  ಅಫ್ತಾಬ್‌ ಪೂನಾವಾಲಾ ಎಂಬಾತ ತನ್ನ ಗೆಳತಿ ಶ್ರದ್ಧಾಳನ್ನು ಕೊಲೆ ಮಾಡಿ, ದೇಹವನ್ನು ತುಂಡು ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ… ಈ ಐಡಿಯಾ ಆತನಿಗೆ ಹೇಗೆ ಬಂತು ಗೊತ್ತಾ…? ಅವನಿಗೆ ಸಹಾಯ ಮಾಡಿದ್ದು ಯಾರು ಗೊತ್ತಾ..? ಮನುಷ್ಯರಂತೂ ಅಲ್ಲ.. ಅವನಿಗೆ ನೆರವಾಗಿದ್ದು ಇಂಟರ್‌ನೆಟ್…‌

ಹೌದು, ಆ ರಾಕ್ಷಸ ಅಫ್ತಾಬ್‌ , ಶ್ರದ್ಧಾಳನ್ನು ಕೊಲೆ ಮಾಡಿದ ನಂತರ, ಇಂಟರ್‌ನೆಟ್‌ನಲ್ಲಿ “ಸಾಕ್ಷ್ಯ ಸಿಗದೆ ಮೃತ ದೇಹವನ್ನು ವಿಲೇವಾರಿ ಮಾಡುವುದು ಹೇಗೆ?”, “ಮೃತ ದೇಹವನ್ನು ತುಂಡುಗಳಾಗಿ ಕತ್ತರಿಸುವುದು ಹೇಗೆ?” ಎಂದು ಸರ್ಚ್‌ ಮಾಡಿದ್ದ… ಇಂಟರ್‌ನೆಟ್‌ ಕೊಟ್ಟ ಮಾಹಿತಿಯಂತೆ ಆತ ಶ್ರದ್ಧಾಳನ್ನು ತುಂಡು ತುಂಡಾಗಿ ಕತ್ತರಿಸಿದ್ದ.. ಇದು ೨೦೨೨ರ ಮೇ ೧೮ರಂದು ಬೆಳಕಿಗೆ ಬಂದಿತ್ತು..

ಇನ್ನು ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿತ್ತು. 2023ರ ಮೇ 12 ರಂದು ಹೈದರಾಬಾದ್‌ನಲ್ಲಿ ಯರ್ರಂ ಅನುರಾಧಾ ರೆಡ್ಡಿ ಎಂಬ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿದ್ದ ಚಂದ್ರ ಮೋಹನ್ ಎಂಬಾತ, “ಮೃತ ದೇಹದಿಂದ ದುರ್ವಾಸನೆ ಬರದಂತೆ ಏನು ಮಾಡಬೇಕು?” ಎಂದು ಸರ್ಚ್‌ ಮಾಡಿದ್ದನಂತೆ. ಅದೇ ರೀತಿ ಅವನೂ ಕೂಡಾ ಮೃತದೇಹವನ್ನು ತುಂಡು ತುಂಡು ಮಾಡಿದ್ದ…

ಈ ಹಿಂದೆ ಸಿನಿಮಾಗಳನ್ನು ನೋಡಿ ಅದರಂತೆ ಕೊಲೆ ಮಾಡುತ್ತಿದ್ದ, ದರೋಡೆ ಮಾಡುತ್ತಿದ್ದ ಘಟನೆಗಳು ನಡೆಯುತ್ತಿದ್ದವು. ಆದ್ರೆ ಈಗ ಇಂಟರ್‌ನೆಟ್‌ ಯುಗ.. ಇಂಟರ್‌ನೆಟ್‌ನಿಂದ ಎಷ್ಟು ಉಪಯೋಗವಿದೆಯೋ, ಅಷ್ಟೇ ತೊಂದರೆಯೂ ಇದೆ… ಇಂಟರ್‌ನೆಟ್‌ ಇಂತಹ ದುರುಳರ ಕೈಗೆ ಸಿಕ್ಕಿರೆ ಅನಾಹುತಗಳಿಗೆ ಅದೇ ತೋರಿಸಿಬಿಡುತ್ತದೆ…

ಇಂತಹ ಕೊಲೆಗಳನ್ನು ಮಾಡಲು, ಅಥವಾ ಮಾಡಿದ ಕೊಲೆಗಳಿಂದ ತಪ್ಪಿಸಿಕೊಳ್ಳಲು ಅಪರಾಧಿಗಳು ಹೆಚ್ಚಾಗಿ ಇಂಟರ್ನೆಟ್ ಅನ್ನು ಆಶ್ರಯಿಸುತ್ತಿದ್ದಾರೆ. ಪ್ರಪಂಚದಾದ್ಯಂತ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

2023ರ ಜನವರಿಯಲ್ಲಿ, ಅಮೇರಿಕದಲ್ಲಿ ಅನ್ನಾ ವಾಲ್ಸ್ ಎಂಬಾಕೆ ಕೊಲೆಯಾದಳು. ಗೂಗಲ್ ಸರ್ಚ್ ಹಿಸ್ಟರಿ ಮೂಲಕ ಅನ್ನಾ ವಾಲ್ಸ್ ಅವರ ಪತಿ ಬ್ರಿಯಾನ್ ವಾಲ್ಸ್ ಕೊಲೆಯ ಅಪರಾಧಿ ಎಂದು ಪೊಲೀಸರು ಗುರುತಿಸಿದ್ದಾರೆ. ಆತ ಕೂಡಾ ಇಂಟರ್‌ನೆಟ್‌ನಲ್ಲಿ “ಫಾರ್ಮಾಲ್ಡಿಹೈಡ್ ಎಂದರೇನು?”, ದೇಹವನ್ನು ಬಚ್ಚಿಡಲು ಹತ್ತು ಮಾರ್ಗಗಳೇನು..?, “ಡಿಎನ್ಎ ಎಷ್ಟು ಕಾಲ ಉಳಿಯುತ್ತದೆ?”, “ರಕ್ತದ ಕಲೆಗಳನ್ನು ಒರೆಸುವುದು ಹೇಗೆ?” ಎಂಬುದನ್ನು ಹುಡುಕಾಡಿದ್ದ.

ಈ ರೀತಿ ಕೊಲೆಗಳಾದ ಮೇಲೆ ಆರೋಪಿಗಳು ಒಂದೇ ಉತ್ತರ ಹೇಳೋದು. ಸಂಗಾತಿ ಜೊತೆ ತುಂಬಾ ಜಗಳ ಆಗಿತ್ತು. ಆ ಕೋಪದಲ್ಲಿ ನಾನು ಆಕೆ ಮೇಲೆ ಹಲ್ಲೆ ಮಾಡಿದೆ. ಆಕೆ ಮೃತಪಟ್ಟಳು. ನಂತರ ಏನು ಮಾಡಬೇಕೆಂದು ತೋಚದೆ ಆಕೆಯ ದೇಹವನ್ನು ತುಂಡು ತುಂಡು ಮಾಡಿದೆ ಎಂದು ಹೇಳುತ್ತಾರೆ. ಆದ್ರೆ, ಮನಃಶಾಸ್ತ್ರಜ್ಞರು ಹೇಳೋದೇ ಬೇರೆ. ಇಂತಹವರು ಕೊಲೆ ಮಾಡೋದಕ್ಕೆ ಮೊದಲೇ ಸ್ಕೆಚ್‌ ರೂಪಿಸಿರುತ್ತಾರಂತೆ. ಹೇಗೆ ಕೊಲೆ ಮಾಡಬೇಕು..?, ನಂತರ ತಪ್ಪಿಸಿಕೊಳ್ಳೋದು ಹೇಗೆ ಅಂತ ಯೋಚಿಸುತ್ತಿರುತ್ತಾರಂತೆ.

 

ಹಂತಕರು ಹತ್ಯೆ ಮಾಡೋಕೂ ಮೊದಲು ಏನೆಲ್ಲಾ ಯೋಚಿಸ್ತಾರೆ..?

೧. ಒಂದೇ ವಿಷಯದ ಕಡೆ ಅವರು ಗಮನ ಕೊಟ್ಟಿರುತ್ತಾರೆ

೨. ಇತರೆ ವಿಷಯಗಳ ಬಗ್ಗೆ ಅವರು ಗಮನವನ್ನೇ ಹರಿಸೋದಿಲ್ಲ

೩. ವಿನಾಕಾರಣ ಕೋಪ ಮಾಡಿಕೊಳ್ಳುತ್ತಿರುತ್ತಾರೆ

೪. ಬೇಕಂತಾನೇ ಪದೇಪದೇ ಜಗಳ ಕಾಯುತ್ತಿರುತ್ತಾರೆ

೫. ಸಣ್ಣ ಸಣ್ಣ ತಪ್ಪುಗಳಿಗೂ ಕೋಪ ನೆತ್ತಿಗೇರಿಸಿಕೊಳ್ಳುತ್ತಿರುತ್ತಾರೆ

೬. ಅವರಲ್ಲಿ ಮೊಂಡುತನ ಹೆಚ್ಚಾಗುತ್ತಿರುತ್ತದೆ

೭. ಯಾರನ್ನೂ ಭೇಟಿಯಾಗೋದಿಲ್ಲ, ಒಬ್ಬಂಟಿಯಾಗಿರುತ್ತಾರೆ

೮. ಯಾವಾಗಲೂ ಏನೋ ಒಂದು ಯೋಚನೆ ಮಾಡುತ್ತಿರುತ್ತಾರೆ

ಈ ಗುಣಲಕ್ಷಣಗಳು ಎಲ್ಲಾ ಅಪರಾಧಿಗಳಲ್ಲಿ ಒಂದೇ ಆಗಿರುವುದಿಲ್ಲ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ಕೊಲೆಗಾರರ ​​ಮೆದುಳು ಒಂದೇ ಆಗಿರುತ್ತದೆಯೇ?
ಬ್ರಿಟಿಷ್ ನರವಿಜ್ಞಾನಿ ಪ್ರೊಫೆಸರ್ ಆಡ್ರಿಯನ್ ರೈನ್ ಅವರು ಅಪರಾಧ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕ್ಯಾಲಿಫೋರ್ನಿಯಾದಲ್ಲಿ ಇಂತಹ ವಿಷಯದ ಮೇಲೆ ಆಸಕ್ತಿದಾಯಕ ಅಧ್ಯಯನವೊಂದನ್ನು ನಡೆಸಿದರು. ಪ್ರೊಫೆಸರ್ ರೈನ್ ಮತ್ತು ಅವರ ತಂಡ ಕೊಲೆಗಾರರ ​​ಮೆದುಳಿನ ಸ್ಕ್ಯಾನ್‌ಗಳನ್ನು ಅಧ್ಯಯನ ಮಾಡಿದರು.  ಹಲವಾರು ವರ್ಷಗಳಿಂದ ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಕಂಡುಹಿಡಿಯುವುದೇ ಈ ಅಧ್ಯಯನದ ಉದ್ದೇಶವಾಗಿತ್ತು. ಕೊಲೆಗಾರರ ​​ಮೆದುಳಿನಲ್ಲಿನ ಬದಲಾವಣೆಗಳು ಬಹುತೇಕ ಒಂದೇ ಆಗಿವೆ ಎಂಬುದು ಈ ಅಧ್ಯಯನದ ವರದಿಯಾಗಿತ್ತು.

ಭಾವನೆಗಳನ್ನು ನಿಯಂತ್ರಿಸುವ ಮೆದುಳಿನ ಮುಂಭಾಗದ ಭಾಗವಾದ ಪ್ರಿಫ್ರಂಟಲ್ ಕಾರ್ಟೆಕ್ಸ್‌ನ ಕಡಿಮೆ ಕಾರ್ಯವನ್ನು ಗಮನಿಸಲಾಗಿದೆ. ಆದ್ದರಿಂದ, ಕೊಲೆಗಾರರು ಹೆಚ್ಚು ಕೋಪಕ್ಕೆ ಒಳಗಾಗುತ್ತಾರೆ.  ಅದೇ ಸಮಯದಲ್ಲಿ ಅವರು ತಮ್ಮ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾರೆ ಎಂದು ಅಧ್ಯಯನ ಹೇಳಿದೆ.

ಬಾಲ್ಯದಲ್ಲಿ ಹಿಂಸೆಗೆ ಒಡ್ಡಿಕೊಳ್ಳುವುದರಿಂದ ಅವರ ಮಿದುಳುಗಳಿಗೆ, ವಿಶೇಷವಾಗಿ ಮೆದುಳಿನ ಮುಂಭಾಗದ ಹಾಳೆಗಳಿಗೆ ದೈಹಿಕ ಹಾನಿ ಉಂಟಾಗುತ್ತದೆ ಎಂದು ರೈನ್ ಅವರ ಅಧ್ಯಯನ ಕಂಡುಹಿಡಿದಿದೆ.

ಕೊಲೆಗಳಿಗೆ ಪ್ರಮುಖ ಕಾರಣಗಳೇನು..?
ವೈಯಕ್ತಿಕ ಭಿನ್ನಾಪ್ರಾಯಗಳು
ಸೇಡು ತೀರಿಸಿಕೊಳ್ಳಬೇಕೆಂಬ ಹಠ
ಹಣಕಾಸಿನ ವಹಿವಾಟುಗಳಲ್ಲಿ ವ್ಯತ್ಯಾಸ
ಗಂಭೀರ ಪ್ರೇಮ ಪ್ರಕರಣಗಳು
ಮಾನಸಿಕ ಅಸ್ವಸ್ಥತೆ
ಮನೋರೋಗ
ಯಾಂಟಿ ಸೋಷಿಯಲ್‌ ಪರ್ಸನಾಲಿಟಿ ಡಿಸ್‌ ಆರ್ಡರ್‌
ಭ್ರಮೆಗಳು
ಮಾನಸಿಕ ಅಸ್ವಸ್ಥತೆಗಳು

ಮೂರು ತಿಂಗಳ ಹಿಂದೆ, ಹೈದರಾಬಾದ್‌ನ ಉಪನಗರದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ನವೀನ್‌ನನ್ನು ಕೊಲೆ ಮಾಡಲಾಗಿತ್ತು. ಆತನ ಸ್ನೇಹಿತ ಹರಿಹರ ಕೃಷ್ಣ ಕೊಲೆ ಮಾಡಿದ್ದ.  ಹತ್ಯೆಗೂ ಮುನ್ನ ಹರಿಹರ ಕೃಷ್ಣ ಅಂತರ್ಜಾಲದಲ್ಲಿ ಮಾಹಿತಿಗಾಗಿ ಹುಡುಕಾಟ ನಡೆಸಿರುವುದು ಪೊಲೀಸರಿಗೆ ಗೊತ್ತಾಗಿದೆ. ಜನರಿಗೆ ಕೊಲೆಯ ಕಲ್ಪನೆ ಬಂದಾಗ, ಕೊಲೆ ಮಾಡಿದ ಮೇಲೆ ಯಾರಿಗೂ ಗೊತ್ತಾಗದಂತೆ ತಪ್ಪಿಸಿಕೊಳ್ಳುವುದಕ್ಕಾಗಿ ಅವರು ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳ ಸಹಾಯ ಪಡೆಯುತ್ತಿದ್ದಾರೆ. ಕೊಲೆಗಳನ್ನು ಪ್ರಚೋದಿಸುವ ಮಾಹಿತಿ ಅಂತರ್ಜಾಲದಲ್ಲಿ ವ್ಯಾಪಕವಾಗಿದೆ.

 

Share Post