ಮಳೆಗೆ ಬಲಿ; ಬಂಧುಗಳನ್ನು ಕರೆಸಿ, ಅವರ ಮುಂದೆಯೇ ಹೆಣವಾದ ಯುವತಿ
ಬೆಂಗಳೂರು; ಬೆಂಗಳೂರಲ್ಲಿ ಯಾವಾಗ ಏನಾಗುತ್ತೆ ಅನ್ನೋದೇ ಗೊತ್ತಾಗೋದಿಲ್ಲ. ಈಗ ಇದ್ದವರು ಸ್ವಲ್ಪ ಹೊತ್ತಲ್ಲೇ ಇರೋದಿಲ್ಲ. ಯಮ ಯಾವಾಗ ಯಾವ ರೂಪದಲ್ಲಿ ಬಂದು ವಕ್ಕರಿಸಿಕೊಳ್ತಾನೋ ಗೊತ್ತಾಗೋದಿಲ್ಲ. ಇವತ್ತು ಅದೇ ರೀತಿ ಆಗಿದೆ. ತನ್ನ ಬಂಧುಗಳನ್ನು ಬೆಂಗಳೂರು ತೋರಿಸಲು ಕರೆಸಿದ್ದ ಆಂಧ್ರ ಮೂಲದ ಮಹಿಳಾ ಟೆಕ್ಕಿ, ಮಳೆಯ ನೀರಲ್ಲಿ ಸಿಲುಕಿ ಬಂಧುಗಳ ಮುಂದೆಯೇ ಸಾವನ್ನಪ್ಪಿದ್ದಾಳೆ.
ಇಂದು ಸಂಜೆ ಸುರಿದ ಭಾರಿ ಮಳೆಗೆ ಭಾನುರೇಖಾ ಎಂಬ 22 ವರ್ಷದ ಮಹಿಳಾ ಟೆಕ್ಕಿ ಸಾವನ್ನಪ್ಪಿದ್ದಾರೆ. ಕೆ.ಆರ್.ವೃತ್ತದ ಬಳಿಯ ಅಂಡರ್ಪಾಸ್ನಲ್ಲಿ ಈ ದುರ್ಘಟನೆ ನಡೆದಿದೆ. ಬಂಧುಗಳೊಂದಿಗೆ ಕಬ್ಬನ್ ಪಾರ್ಕ್ , ವಿಧಾನಸೌಧ ಸೇರಿದಂತೆ ಹಲವು ಪ್ರದೇಶಗಳನ್ನು ಸುತ್ತಿಸಿದ್ದಾರೆ. ನಂತರ ಮಳೆ ಬಂದಿದ್ದು, ಈ ವೇಳೆ ಮನೆಗೆ ವಾಪಸ್ ಹೋಗಲು ಮುಂದಾಗಿದ್ದಾರೆ. ಕೆ.ಆರ್.ವೃತ್ತದ ಅಂಡರ್ಪಾಸ್ನಲ್ಲಿ ನೀರು ಹರಿಯುತ್ತಿದ್ದರೂ ಅದರಲ್ಲೇ ಕಾರು ಚಲಾಯಿಸಲಾಗಿದ್ದು, ಕಾರು ಅಲ್ಲೇ ಸಿಲುಕಿಕೊಂಡಿದೆ. ಈ ವೇಳೆ ಭಾನುರೇಖಾ ನೀರಿನಲ್ಲಿ ಸಿಲುಕಿ ಉಸಿರುಕಟ್ಟಿದ್ದಾರೆ. ಅವರನ್ನು ಹಾಗೂ ಕಾರಿನಲ್ಲಿದ್ದ ಇತರರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಭಾನುರೇಖಾ ಸಾವನ್ನಪ್ಪಿದ್ದಾರೆ.
ಭಾನುರೇಖಾ ಇನ್ಫೋಸಿಸ್ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕಾರಿನಲ್ಲಿದ್ದವರಲ್ಲಿ ಭಾನುರೇಖಾ ಹಾಗೂ ವೃದ್ಧೆಯೊಬ್ಬರು ತೀವ್ರ ಅಸ್ವಸ್ಥರಾಗಿದ್ದರು. ಅವರಿಬ್ಬರನ್ನೂ ಹತ್ತರಿದ ಸೇಂಟಾ ಮಾರ್ಥಾಸ್ ಆಸ್ಪತ್ರೆಗೆ ಸೇರಿಸಲಾಯಿತು. ಆದ್ರೆ ಆಸ್ಪತ್ರೆಯವರು ದಾಖಲು ಮಾಡಿಕೊಳ್ಳಲು ಮೊದಲ ನಿರಾಕರಿಸಿ, ಅರ್ಧ ತಾಸಿನ ನಂತರ ದಾಖಲು ಮಾಡಿಕೊಂಡಿದ್ದರಿಂದ ಯುವತಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.
ನೂತನ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.