BengaluruDistrictsPolitics

ಗೆಲಿಶಾನುರಾ ಬುಜ್ಜಿ..!; ಚಿಕ್ಕಬಳ್ಳಾಪುರದ ʻಸುಧಾರಕʼ ಸೋತಿದ್ಯಾಕೆ ಗೊತ್ತಾ..?

ಬೆಂಗಳೂರು; ರಾಜ್ಯದಲ್ಲಿ ಅತಿಹೆಚ್ಚು ಅಚ್ಚರಿ ಹಾಗೂ ಕುತೂಹಲ ಮೂಡಿಸಿರುವಂತಹ ಫಲಿತಾಂಶ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಫಲಿತಾಂಶ… ನೀಟ್‌ ಪರೀಕ್ಷಾರ್ಥಿಗಳಿಗೆ ಪಾಠ ಮಾಡಿಕೊಂಡಿದ್ದ ಪ್ರದೀಪ್‌ ಈಶ್ವರ್‌ ಎಂಬ ಹುಡುಗನನ್ನು ಕರೆತಂದು ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಿಲ್ಲಿಸಲಾಗಿತ್ತು. ಈ ರಿಸ್ಕ್‌ ತೆಗೆದುಕೊಂಡವರು, ಚಿಂತಾಮಣಿಯ ಸುಧಾಕರ್‌, ಗೌರಿಬಿದನೂರಿನ ಶಿವಂಶಕರರೆಡ್ಡಿ ಹಾಗೂ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರು. ನಂತರ ಚುನಾವಣೆಯಲ್ಲಿ ಎಲ್ಲಾ ರೀತಿಯಲ್ಲೂ ಬೆನ್ನೆಲುಬಾಗಿ ನಿಂತಿದ್ದು ಎಂ.ಅರ್‌.ಸೀತಾರಾಮ್‌ ಹಾಗೂ ರಕ್ಷಾ ರಾಮಯ್ಯ ಅವರು… ಚುನಾವಣೆ ಇನ್ನು 25 ದಿನ ಇದೆ ಅನ್ನುವಾಗಿ ಚಿಕ್ಕಬಳ್ಳಾಪುರದಲ್ಲಿ ಕಾಣಿಸಿಕೊಂಡ ಪ್ರದೀಪ್‌ ಈಶ್ವರ್‌ , ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡಾ.ಕೆ.ಸುಧಾಕರ್‌ ಅವರನ್ನು ಸೋಲಿಸಿದ್ದಾರೆ… ಈ ಮೂಲಕ ಅವರದೇ ಶೈಲಿಯಲ್ಲಿ ಗೆಲಿಶಾನು ರಾ ಬುಜ್ಜಿ ಎಂದು ಹೇಳುತ್ತಿದ್ದಾರೆ…

ಅಂದಹಾಗೆ, ಕುಮಾರಸ್ವಾಮಿಯವರು ಮೊದಲ ಬಾರಿಗೆ ಸಿಎಂ ಆದಾಗ ಚಿಕ್ಕಬಳ್ಳಾಪುರವನ್ನು ಜಿಲ್ಲೆಯನ್ನಾಗಿ ಮಾಡಲಾಗಿತ್ತು. ಆದ್ರೆ ಸುಧಾಕರ್‌ ಅವರು ಶಾಸಕರಾಗುವ ತನಕ ಚಿಕ್ಕಬಳ್ಳಾಪುರ ಅಭಿವೃದ್ಧಿ ಕಂಡಿರಲಿಲ್ಲ. ಆದ್ರೆ ಸುಧಾಕರ್‌ ಚಿಕ್ಕಬಳ್ಳಾಪುರವನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಮಾಡಿದರು. ಎಲ್ಲರೂ ತಿರುಗಿ ನೋಡುವಂತೆ ಮಾಡಿದರು. ಎಚ್‌.ಎನ್‌.ವ್ಯಾಲಿ ನೀರು ತಂದಿದ್ದು, ಸರ್ಕಾರಿ ಮೆಡಿಕಲ್‌ ಕಾಲೇಜು ತಂದಿದ್ದು, ಇಶಾ ಫೌಂಡೇಶನ್‌ ಶಾಖೆ ಪ್ರಾರಂಭಿಸುವಂತೆ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿದ್ದು, ಕಾಲೇಜು ಕಟ್ಟಡಗಳು, ಬಸ್‌ ಸ್ಟ್ರಾಂಡ್‌ಗಳು ಹೀಗೆ ಎಲ್ಲವನ್ನೂ ಮಾಡಿದ್ದರು ಸುಧಾಕರ್‌. ಮಂಚೇನಹಳ್ಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವುದಕ್ಕೂ ಡಾ.ಕೆ.ಸುಧಾಕರ್‌ ಅವರೇ ಕಾರಣ.

ಈ ಹಿಂದೆ ಬೇರೆ ಯಾವ ಶಾಸಕರೂ ಮಾಡದಂತ ಅಭಿವೃದ್ಧಿ ಕೆಲಸಗಳನ್ನು ಸುಧಾಕರ್‌ ಅವರು ಮಾಡಿದ್ದಾರೆ. ಅವರ ಬೆಂಬಲಿಗರೂ ಹಾಗೂ ವಿರೋಧಿಗಳು ಇಬ್ಬರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಸುಧಾಕರ್‌ ಕಾಂಗ್ರೆಸ್‌ನಲ್ಲಿದ್ದಾಗಲೂ, ಬಿಜೆಪಿಗೆ ಬಂದಾಗಲೂ ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಅವರು ಯಾವ ಮಟ್ಟಕ್ಕೆ ಬೆಳೆದಿದ್ದರು ಎಂದರೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದ್ರೂ ಸುಧಾಕರ್‌ ಸೋತಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ ಪ್ರದೀಪ್‌ ಈಶ್ವರ್‌ ಅವರು ಸುಧಾಕರ್‌ ಅವರನ್ನು ಸೋಲಿಸಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದರೂ ಸುಧಾಕರ್‌ ಅವರನ್ನು ಹತ್ತು ಸಾವಿರಕ್ಕೂ ಅಧಿಕ ಮತಗಳಿಂದ ಜನ ಸೋಲಿಸೋದಕ್ಕೆ ಕಾರಣ ಏನು..?. ಕುತೂಹಲ ಅಲ್ಲವೇ..? ಸುಧಾಕರ್‌ ಸೋಲಿಗೆ ಕಾರಣವಾದ ಕೆಲವು ಕುತೂಹಲಕಾರಿ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ ನೋಡಿ…

ಸುಧಾಕರ್‌ ಸೋಲಿಗೆ ಕಾರಣ – 1;

ಎಲ್ಲರೂ ಹೇಳೋದು ಏನಂದ್ರೆ ಸುಧಾಕರ್‌ ಕೆಲಸಗಳನ್ನು ಮಾಡಿಸಿದ್ದಾರೆ. ಆದ್ರೆ ಸಾಮಾನ್ಯ ಜನರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ. ಅದರಲ್ಲೂ ಸಚಿವನಾದ ಮೇಲೆ ಜನರ ಕೈಗೇ ಸಿಗುತ್ತಿರಲಿಲ್ಲವಂತೆ. ಏನಾದರೂ ಕೆಲಸ ಬಯಸಿ ಬೆಂಗಳೂರಿನ ಸುಧಾಕರ್‌ ನಿವಾಸಕ್ಕೆ ಹೋದರೆ ಗಂಟೆಗಟ್ಟಲೆ ಕಾಯಿಸುತ್ತಿದ್ದಂತೆ. ಸುಧಾಕರ್‌ ಜೊತೆ ಓಡಾಡುತ್ತಿದ್ದವರು, ಇತರೆಯವರು ಎಲ್ಲರೂ ಇದೇ ದೂರನ್ನೇ ಹೇಳುತ್ತಿದ್ದರು. ಇದೊಂದೇ ಕಾರಣವನ್ನಿಟ್ಟುಕೊಂಡು ಸುಧಾಕರ್‌ ಜೊತೆಗೆ ಇದ್ದವರು ಯಾರಾದರೂ ಸೂಕ್ತ ಅಭ್ಯರ್ಥಿ ಬಂದರೆ ಸುಧಾಕರ್‌ರನ್ನು ಸೋಲಿಸಬೇಕು ಎಂದು ಹೇಳುತ್ತಿದ್ದವರು ಸಾಕಷ್ಟು ಜನ ಇದ್ದರು.

ಸುಧಾಕರ್‌ ಸೋಲಿಗೆ ಕಾರಣ – 2;

ಪ್ರಚಾರದ ಸಮಯದಲ್ಲಿ ಸುಧಾಕರ್‌ ಅವರು ಒಂದು ವಿಚಾರ ಹೇಳುತ್ತಿದ್ದರು. ನನಗೆ ಅಪೋಸಿಟ್‌ ಕ್ಯಾಂಡಿಡೇಟೇ ಇಲ್ಲ ಎಂದು ಹೇಳಿದ್ದರು.  ನಿಜ ಹೇಳಬೇಕು ಅಂದ್ರೆ ಸುಧಾಕರ್‌ ಚಿಕ್ಕಬಳ್ಳಾಪುರಕ್ಕೆ ಕಾಲಿಟ್ಟ ಮೇಲೆ, ಶಾಸಕನಾಗಿ ಆಯ್ಕೆಯಾದ ಮೇಲೆ ಇತರೆ ಪಕ್ಷದ ಜನಪ್ರತಿನಿಧಿಗಳು, ಮುಖಂಡರನ್ನೆಲ್ಲಾ ತನ್ನತ್ತ ಸೆಳೆದುಕೊಂಡಿದ್ದರು. ಚಿಕ್ಕಬಳ್ಳಾಪುರದಲ್ಲಿ ಪ್ರಬಲವಾಗಿದ್ದ ಜೆಡಿಎಸ್‌ ಪಕ್ಷವನ್ನು ಹೆಚ್ಚು ಕಡಿಮೆ ನಿರ್ಣಾಮ ಮಾಡಿದ್ದರು. ಜೆಡಿಎಸ್‌ನಲ್ಲಿದ್ದವರನ್ನೆಲ್ಲಾ ಸುಧಾಕರ್‌ ಇರುವ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಸುಧಾಕರ್‌ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದಾಗಲೂ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷದ ಮುಖಂಡರ ಆಪರೇಷನ್‌ ನಡೆದಿತ್ತು. ಅಂದರೆ ಸುಧಾಕರ್‌ ಅವರು ನನಗೆ ಪ್ರಬಲ ಪ್ರತಿಸ್ಪರ್ಧಿಯೇ ಇರಬಾರದು ಎನ್ನುವಂತೆ ನೋಡಿಕೊಳ್ಳುತ್ತಿದ್ದರು. ಕೆಲವರು ಹಣ ಕೊಟ್ಟು ಮುಖಂಡರನ್ನು ಖರೀದಿಸಿದ್ದಾರೆ ಎಂದು ಆರೋಪಿಸುತ್ತಾರೆ. ಆದ್ರೆ ಅದು ಎಷ್ಟು ನಿಜವೋ ಗೊತ್ತಿಲ್ಲ.. ಆದ್ರೆ ಬಹುತೇಕರು ಸುಧಾಕರ್‌ ಕಡೆ ಹೋಗಿದ್ದಂತೂ ಸತ್ಯ.

ಆದ್ರೆ, ಎಲ್ಲರನ್ನೂ ಒಂದು ಕಡೆ ತರೋದು ಇದೆಯಲ್ಲಾ ಅದು ನೋಡೋರಿಗೆ ಸರ್ವಾಧಿಕಾರಿ ವರ್ತನೆಯನ್ನು ತೋರಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಇಂತಹ ವರ್ತನೆಯನ್ನು ಜನ ಇಷ್ಟಪಡೋದಿಲ್ಲ. ಎಲ್ಲೋ ಒಂದು ಕಡೆ ಸುಧಾಕರ್‌ ಅವರ ಇಂತಹ ವರ್ತನೆ ಮುಂದೆ ಸಾಮಾನ್ಯ ಜನರ ಮೇಲೂ ಪ್ತಯೋಗವಾಗಬಹುದು ಎಂಬ ಭೀತಿ ಸಾಮಾನ್ಯ ಜನಕ್ಕೆ ಬಂದಿರಬಹುದು.

ಸುಧಾಕರ್‌ ಸೋಲಿಗೆ ಕಾರಣ – 3;

ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳ ಶಕ್ತಿಯನ್ನು ಗಮನಿಸದೇ ಹೋದದ್ದು. ಪಾಠ ಮಾಡುತ್ತಿದ್ದ ತಮ್ಮದೇ ಊರಿನ ಪ್ರದೀಪ್‌ ಈಶ್ವರ್‌ ನನ್ನ ಪ್ರತಿಸ್ಪರ್ಧಿಯೇ ಅಲ್ಲ ಎಂದು ನೆಗ್ಲೆಕ್ಟ್‌ ಮಾಡಿದ್ದು. ಜೊತೆಗೆ ಮತದಾನದ ದಿನಗಳು ಹತ್ತಿರವಾಗುವಾಗ ಜೆಡಿಎಸ್‌ನಿಂದ ಇನ್‌ನಡೈರೆಕ್ಟಾಗಿ ಪ್ರದೀಪ್‌ ಈಶ್ವರ್‌ ಬೆಂಬಲ ಸಿಕ್ಕಿದ್ದು, ಸುಧಾಕರ್‌ ಸೋಲಿಗೆ ಕಾರಣವಾಗಿದೆ.

ಪ್ರದೀಪ್‌ ಈಶ್ವರ್‌ ಸಾಮಾನ್ಯ ಜನರಿಗೆ ಮುಟ್ಟೋ ಶೈಲಿಯಲ್ಲಿನ ಪ್ರಚಾರ ಮಾಡಿದ್ದು ಕೂಡಾ ಸುಧಾಕರ್‌ ಸೋಲಿಗೆ ಕಾರಣವಾಗಿದೆ. ಏನೇ ಆಗಲೀ ಚಿಕ್ಕಬಳ್ಳಾಪುರದ ಸುಧಾರಕ ಎನಿಸಿಕೊಂಡಿದ್ದ ಸುಧಾಕರ್‌ ಅವರು ಸಣ್ಣ ಕಾರಣಗಳಿಗಾಗಿ ಸೋತಿದ್ದಾರೆ.. ಈ ಪ್ರದೀಪ್‌ ಈಶ್ವರ್‌ ಬಂದಿದ್ದಾರೆ.. ಅವರು ಕೂಡಾ ಛಲಗಾರ… ಉತ್ತಮ ಕನಸುಗಳನ್ನು ಇಟ್ಟುಕೊಂಡಿದ್ದಾರೆ.. ಆ ಕನಸು ಚಿಕ್ಕಬಳ್ಳಾಪುರದ ಮತ್ತಷ್ಟು ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತಾ ನೋಡಬೇಕು..

Share Post