BengaluruPolitics

ಚಾಣಕ್ಯನ ತಂತ್ರವೂ ನಡೆಯಲಿಲ್ಲ, ವಿಶ್ವಗುರುವಿನ ಮಂತ್ರವೂ ಕೆಲಸ ಮಾಡಲಿಲ್ಲ..!

ಬೆಂಗಳೂರು; ಕಾಂಗ್ರೆಸ್‌ ಪ್ರಚಂಡ ಬಹುಮತದೊಂದಿಗೆ ಗೆದ್ದಿದೆ. ಆಡಳಿತಾರೂಢ ಬಿಜೆಪಿ ಸೋತುಸುಣ್ಣವಾಗಿದೆ. ನಿಜ ಹೇಳಬೇಕೆಂದರೆ ಇದು ರಾಜ್ಯ ಬಿಜೆಪಿ ನಾಯಕರು ಸೋಲು ಅಲ್ಲವೇ ಅಲ್ಲ. ಇದು ಮೋದಿ ಸೋಲು, ಅಮಿತ್‌ ಶಾ ಸೋಲು. ಇಡೀ ಕೇಂದ್ರ ಸರ್ಕಾರದ ಸೋಲು. ಯಾಕಂದ್ರೆ, ಚುನಾವಣೆಯಲ್ಲಿ ಹೇಳೋದಕ್ಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಒಂದು ಮುಖವೂ ಇರಲಿಲ್ಲ. ಇಡೀ ಚುನಾವಣೆಯಲ್ಲಿ ಕೇಳಿಬಂದಿದ್ದು ಮೋದಿ ಹೆಸರು ಮಾತ್ರ. ರಾಜ್ಯ ನಾಯಕರೆಲ್ಲಾ ಮೋದಿಗೆ ಮತ ಹಾಕಿ. ಮೋದಿ ಮುಖ ನೋಡಿ ಬಿಜೆಪಿಯನ್ನು ಗೆಲ್ಲಿಸಿ, ಡಬಲ್‌ ಎಂಜಿನ್‌ ಸರ್ಕಾರಕ್ಕೆ ಮತ ನೀಡಿ ಎಂದು ಹೇಳುತ್ತಾ ಬಂದಿದ್ದರು. ಸ್ವತಃ ಮೋದಿ ಕೂಡಾ ಇದು ನನ್ನದೇ ಚುನಾವಣೆ ಎಂಬಂತೆ ಕರ್ನಾಟಕದಲ್ಲಿ ಠಿಕಾಣಿ ಹೂಡಿಬಿಟ್ಟಿದ್ದರು. ಸುಮಾರು ಮೂವತ್ತಕ್ಕೂ ಹೆಚ್ಚು ರೋಡ್‌ ಶೋಗಳನ್ನು ನಡೆಸಿದರು. ಬಹಿರಂಗ ಸಭೆಗಳನ್ನು ನಡೆಸಿದರು. ಆದ್ರೆ ಮೋದಿ ಆಟ ನಡೆಯಲೇ ಇಲ್ಲ. ಚಾಣಕ್ಯನ ತಂತ್ರ ಕರ್ನಾಟಕದಲ್ಲಿ ವರ್ಕೌಟ್‌ ಆಗೋದಿಲ್ಲ ಅನ್ನೋದನ್ನು ಕರ್ನಾಟಕದ ಜನ ಸಾಬೀತು ಮಾಡಿದ್ದಾರೆ.

ಕೇಂದ್ರ ಸರ್ಕಾರದ ಇಡೀ ಮಂತ್ರಿಮಂಡಲವೇ ರಾಜ್ಯದಲ್ಲಿತ್ತು. ಎಂದೂ ಬಾರದ ಪ್ರಧಾನಿ ನರೇಂದ್ರ ಮೋದಿ ನಿರಂತರವಾಗಿ ರಾಜ್ಯಕ್ಕೆ ಆಗಮಿಸಿದರು. ಎಲ್ಲಿ ಹೋದರೂ ಡಬಲ್‌ ಎಂಜಿನ್‌ ಸರ್ಕಾರಕ್ಕೆ ಮತ ಹಾಕಿ ಎಂದು ಹೇಳಿದರು. ಅಮಿತ್‌ ಶಾ ಕೂಡಾ ನಿರಂತರವಾಗಿ ರಾಜ್ಯದಲ್ಲಿ ಪ್ರಚಾರ ನಡೆಸಿದರು. ಈ ಬಾರಿ ಲಿಂಗಾಯತರ ಮತಗಳಲ್ಲದೇ, ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲೋದಕ್ಕೆ ಸಾಕಷ್ಟು ಸರ್ಕಸ್‌ ಮಾಡಿದರು. ಮಂಡ್ಯದಲ್ಲಿ ಬೃಹತ್‌ ಸಮಾವೇಶ ನಡೆಸಿದ್ದು, ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟಿಸಿದ್ದು, ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದು, ಕೆಂಪೇಗೌಡರ ಮೂರ್ತಿಯನ್ನು ಸ್ಥಾಪನೆ ಮಾಡಿದ್ದು, ಹೀಗೆ ಒಕ್ಕಲಿಗರನ್ನು ಸೆಳೆಯಲು ಬಿಜೆಪಿ ನಾಯಕರು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದ್ರೆ ಅದ್ಯಾವುದೂ ಇಲ್ಲ ವರ್ಕೌಟ್‌ ಆಗಿಲ್ಲ. ಮಂಡ್ಯ, ಮೈಸೂರು ಭಾಗದಲ್ಲಿ ಬಿಜೆಪಿ ಸಾಕಷ್ಟು ಹೀನಾಯವಾಗಿ ಸೋತಿದೆ.

ಅಮಿತ್‌ ಶಾ ಅವರನ್ನು ಚುನಾವಣಾ ಚಾಣಕ್ಯ ಎಂದು ಹೇಳುತ್ತಾರೆ. ಆದ್ರೆ ಒಕ್ಕಲಿಗರ ಮತಗಳನ್ನು ಸೆಳೆಯೋದಕ್ಕೆ ಅವರೇ ತಂತ್ರಗಾರಿಕೆ ರೂಪಿಸಿದ್ದರು. ಟಿಪ್ಪು ವಿಚಾರವನ್ನು ಮುಂದೆ ತಂದಿದ್ದರು. ಉರಿಗೌಡ, ನಂಜೇಗೌಡರು ಟಿಪ್ಪುವನ್ನು ಕೊಂದಿದ್ದು ಎಂಬ ವಿಚಾರವನ್ನು ಹರಿಬಿಡಲಾಗಿತ್ತು. ಹಲವು ಒಕ್ಕಲಿಗ ನಾಯಕರಿಗೆ ಗಾಳ ಹಾಕಲಾಗಿತ್ತು. ಪಕ್ಷದಲ್ಲೇ ಇರುವ ಒಕ್ಕಲಿಗ ನಾಯಕರು ಹಲವು ಟಾಸ್ಕ್‌ಗಳನ್ನು ನೀಡಲಾಗಿತ್ತು. ಆದ್ರೆ, ಅಮಿತ್‌ ಶಾ ಅವರ ಯಾವ ತಂತ್ರಗಳೂ ನಡೆಯಲಿಲ್ಲ.

ಮೋದಿಯವರು ಬೃಹತ್‌ ರೋಡ್‌ ಶೋಗಳನ್ನು ನಡೆಸಿದರು. ಬೆಂಗಳೂರಿನಲ್ಲೇ ಮೂರು ದಿನ ರೋಡ್‌ ಶೋಗಳನ್ನು ನಡೆಸಿದರು. ಬೆಂಗಳೂರಿನಲ್ಲಿ ಸುಮಾರು ಐವತ್ತು ಕಿಲೋ ಮೀಟರ್‌ಗೂ ಹೆಚ್ಚು ರೋಡ್‌ ಶೋ ನಡೆಸಿದರು. ಕನ್ನಡದಲ್ಲಿ ಭಾಷಣ ಮಾಡಿದರು. ಕಾಂಗ್ರೆಸ್‌ 85 ಪರ್ಸೆಂಟ್‌ ಕಮೀಷನ್‌ ಪಡೆಯುವ ಪಕ್ಷ ಎಂದು ಹೇಳಿದರು. ಕರ್ನಾಟಕವನ್ನು ನಂಬರ್‌ ವನ್‌ ಮಾಡುತ್ತೇವೆ ಎಂದು ಪದೇ ಪದೇ ಹೇಳುತ್ತಿದ್ದರು. ಭಜರಂಗದಳದ ವಿಚಾರವನ್ನು ಮುನ್ನೆಲೆಗೆ ತಂದರು. ಎಲ್ಲಿ ಹೋದರೂ ಜೈ ಜೈ ಭಜರಂಗಿ ಎಂದು ಘೋಷಣೆ ಕೂಗಿದರು. ಆದ್ರೆ, ಮೋದಿಯವರ ಯಾವ ತಂತ್ರಗಾರಿಕೆಯೂ ನಡೆಯಲಿಲ್ಲ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯದಲ್ಲಿ ಬಿಜೆಪಿ ಗೆಲ್ಲದಿದ್ದರೆ ಕೇಂದ್ರದಿಂದ ಯಾವ ಅನುದಾನವೂ ಬರೋದಿಲ್ಲ ಎಂದು ಹೇಳಿದರು. ಎರಡೂ ಕಡೆ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಕೇಂದ್ರದಿಂದ ಹೆಚ್ಚು ಅನುದಾನ ತರಿಸಬಹುದು ಎಂದು ಹೇಳಿದ್ದರು. ರಾಜ್ಯಕ್ಕೆ ಬಂದ ಎಲ್ಲಾ ಕೇಂದ್ರ ಬಿಜೆಪಿ ನಾಯಕರೂ ಇದೇ ಡಬಲ್‌ ಎಂಜಿನ್‌ ಸರ್ಕಾರದ ಜಪ ಮಾಡಿದರು. ಮೋದಿ ವಿಶ್ವ ನಾಯಕ. ಅವರಿಗಾಗಿ ರಾಜ್ಯವನ್ನು ಗೆಲ್ಲಿಸಿಕೊಡಿ ಎಂದು ಕೇಳಿದರು. ಆದ್ರೆ, ರೋಡ್‌ ಶೋಗಳಿಗಾಗಿ ಬೀದಿಗೆ ಬಂದಿದ್ದ ಬಿಜೆಪಿ ನಾಯಕರನ್ನು ರಾಜ್ಯದ ಮತದಾರರು ಸೋಲಿಸಿ ಬೀದಿಯಲ್ಲೇ ನಿಲ್ಲಿಸಿಬಿಟ್ಟಿದ್ದಾರೆ.

Share Post