Yadiyurappa; ಯಡಿಯೂರಪ್ಪ ಬೇರೆಯದೇ ಲೆಕ್ಕ ಹೇಳ್ತಿದ್ದಾರೆ; ಅವರೇಳಿದಂತೆಯೇ ಆಗುತ್ತಾ..?
ಶಿವಮೊಗ್ಗ; ಚುನಾವಣೆ ಘೋಷಣೆಯಾದ ದಿನದಿಂದ ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟವಾದ ಮಾತೊಂದನ್ನು ಹೇಳುತ್ತಲೇ ಬಂದಿದ್ದರು. ಈ ಬಾರಿಯೂ ಬಿಜೆಪಿಯೇ ಅಧಿಕಾರಕ್ಕೆ ಬರೋದು. ಬಿಜೆಪಿ 135 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿಯುತ್ತೆ ಅಂತ. ಆದ್ರೆ ಚುನಾವಣೋತ್ತರ ಸಮೀಕ್ಷೆಗಳು ಬೇರೆಯದೇ ವರದಿ ಕೊಟ್ಟಿವೆ. ಆದ್ರೂ ಯಡಿಯೂರಪ್ಪ ಅವರು ಈ ಬಾರಿ ಬಿಜೆಪಿಯೇ ಬರುತ್ತೆ ಎಂದು ದೃಢವಾಗಿ ಹೇಳುತ್ತಿದ್ದಾರೆ. ಆದ್ರೆ, ಸ್ಥಾನಗಳ ಸಂಖ್ಯೆಯನ್ನು ಯಡಿಯೂರಪ್ಪ ಈಗ ಕಡಿಮೆ ಮಾಡಿಕೊಂಡಿದ್ದಾರೆ. 115 ಸ್ಥಾನಗಳನ್ನು ಪಡೆದು ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಅವರು ಹೇಳುತ್ತಿದ್ದಾರೆ.
ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಮಾತನಾಡಿದ್ದಾರೆ. ಹತ್ತಾರು ಖಾಸಗಿ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಗಳು ನಡೆಸಿವೆ. ಅದರಂತೆ ರಾಜಕೀಯ ನಾಯಕರು ಕೂಡಾ ಆಂತರಿಕ ಸಮೀಕ್ಷೆಗಳನ್ನು ನಡೆಸಿರುತ್ತಾರೆ. ಅದರಲ್ಲೂ ಯಡಿಯೂರಪ್ಪ ಅವರಿಗೆ ಅಪಾರವಾದ ರಾಜಕೀಯ ಅನುಭವವಿದೆ. ಅದರ ಆಧಾರದ ಮೇಲೆಯೋ ಏನೋ ಬಿಜೆಪಿ 115 ಸ್ಥಾನ ಗೆಲ್ಲಲಿದೆ ಎಂದು ಹೇಳುತ್ತಿದ್ದಾರೆ. ಮತದಾನ ಮುಗಿದ ಮೇಲೆ ಯಡಿಯೂರಪ್ಪ ಅವರು ರಾಜ್ಯದ ಎಲ್ಲಾ ಭಾಗಗಳ ಮುಖಂಡರ ಜೊತೆ ಯಡಿಯೂರಪ್ಪ ಅವರು ಮಾತನಾಡಿದ್ದಾರಂತೆ. ಅವರ ಅಭಿಪ್ರಾಯಗಳನ್ನು ಪಡೆದಿದ್ದಾರಂತೆ. ಅದರ ಆಧಾರದ ಮೇಲೆ ಹೇಳೋದಾದರೆ ಬಿಜೆಪಿಗೆ 115 ಸ್ಥಾನ ಬರುತ್ತೆ ಅಂತ ಯಡಿಯೂರಪ್ಪ ಹೇಳುತ್ತಿದ್ದಾರೆ.
ಉತ್ತರ ಕರ್ನಾಟಕದ ಒಂದಷ್ಟು ಲಿಂಗಾಯತ ನಾಯಕರು ಪಕ್ಷ ಬಿಟ್ಟುಹೋದರು. ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ರಂತಹ ನಾಯಕರು ಕಾಂಗ್ರೆಸ್ ಸೇರಿದರು. ಈ ಕಾರಣಕ್ಕಾಗಿ ಲಿಂಗಾಯತರಲ್ಲಿ ಒಂದಷ್ಟು ಜನ ಕಾಂಗ್ರೆಸ್ ಪರ ವಾಲಿದ್ದಾರೆ ಎಂಬ ಮಾತುಗಳಿವೆ. ಆದ್ರೆ ಯಡಿಯೂರಪ್ಪ ಅವರು ಅಧಿಕಾರ ಇಲ್ಲದಾಗಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಚುನಾವಣೆ ಸಮಯದಲ್ಲಿ ಓಡಾಡಿದ್ದಾರೆ. ಈ ವೇಳೆ ಯಡಿಯೂರಪ್ಪ ಅವರಿಗೆ ಹಾಗೂ ಬಿಜೆಪಿ ಪಕ್ಷಕ್ಕೆ ಸಾಕಷ್ಟು ಜನ ಬೆಂಬಲ ಸಿಕ್ಕಿತ್ತು. ಮೋದಿ, ಅಮಿತ್ ಶಾ ರ್ಯಾಲಿಗಳಿಗಗೂ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಇನ್ನು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರ ಬಿಜೆಪಿಗೆ ಲಾಭವಾಗುತ್ತೆ ಅನ್ನೋದು ಯಡಿಯೂರಪ್ಪ ಅವರಿಗೆ ಗೊತ್ತಾಗಿತ್ತಂತೆ. ಇದರ ಆಧಾರದ ಮೇಲೆ ಯಡಿಯೂರಪ್ಪ ಈಗಲೂ ಬಿಜೆಪಿಯೇ ಅಧಿಕಾರ ಹಿಡಿಯುತ್ತೆ ಎಂದು ಹೇಳುತ್ತಿದ್ದಾರೆ.