ನಾಳೆ ಸಂಜೆಗೆ ಬಹಿರಂಗ ಪ್ರಚಾರ ಅಂತ್ಯ; ಎರಡು ದಿನ ಮನೆಮನೆ ಪ್ರಚಾರ
ಬೆಂಗಳೂರು; ಕರ್ನಾಟಕ ವಿಧಾಸಭಾ ಚುನಾವಣೆ ಕೊನೆಯ ಘಟಕ್ಕೆ ಬಂದಿದೆ. ಇಷ್ಟು ದಿನ ಅಬ್ಬರದ ಪ್ರಚಾರ ನಡೆಸಿದ್ದ ನಾಯಕರು ನಾಳೆ ಸಂಜೆಯೊಳಗೆ ತಮ್ಮ ಊರುಗಳಿಗೆ ವಾಪಸ್ ಹೋಗಬೇಕಿದೆ. ಯಾಕಂದ್ರೆ ಮತದಾನ ಶುರುವಾಗುವ 48 ಗಂಟೆ ಮುಂಚೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಅಂದ್ರೆ ನಾಳೆ ಸಂಜೆ 6 ಗಂಟೆಯೊಳಗೆ ಬಹಿರಂಗ ಪ್ರಚಾರ ಮುಗಿಸಬೇಕಾಗಿದೆ. ಹೀಗಾಗಿಯೇ ಪ್ರಧಾನಿ ಮೋದಿಯವರು ಇಂದೇ ತಮ್ಮ ರೋಡ್ ಶೋ ಮುಗಿಸಿ ದೆಹಲಿಗೆ ವಾಪಸ್ ಹೋಗುತ್ತಿದ್ದಾರೆ. ಬಹುತೇಕ ಕೇಂದ್ರದ ನಾಯಕರು ಇಂದೇ ದೆಹಲಿಗೆ ವಾಪಸ್ ಹೋಗಲಿದ್ದಾರೆ.
ಬುಧವಾರ ಬೆಳಗ್ಗೆ ಏಳು ಗಂಟೆಯಿಂದ ಮತದಾನ ಆರಂಭವಾಗಲಿದೆ. ಅದಕ್ಕೂ 48 ಗಂಟೆ ಮುಂಚೆವರೆಗೆ ಮಾತ್ರ ಬಹಿರಂಗ ಪ್ರಚಾರ ನಡೆಯಬೇಕು. ಹೀಗಾಗಿ ನಾಳೆ ಸೋಮವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಇನ್ನು ಮಂಗಳವಾರ ಬೆಳಗ್ಗೆಯಿಂದ ಮನೆ ಮನೆ ಪ್ರಚಾರ ಮಾಡಬಹುದು. ನಾಳೆ ಸಂಜೆಯ ನಂತರ ಮೈಕ್‌ಗಳ ಮೂಲಕ ಪ್ರಚಾರ ನಡೆಸುವಂತಿಲ್ಲ. ಮೆರವಣಿಗೆ, ರೋಡ್ ಶೋ ಏನೂ ಮಾಡುವಂತಿಲ್ಲ.
ಇನ್ನು ನಾಳೆ ಸಂಜೆಯ ನಂತರ ಕ್ಷೇತ್ರಕ್ಕೆ ಸಂಬಂಧಪಡದವರು ಅಲ್ಲಿ ಇರುವಂತಿಲ್ಲ. ನಾಳೆ ಸಂಜೆಯೊಳಗೆ ಎಲ್ಲರೂ ಹೊರಗೆ ಹೋಗಬೇಕು. ಸ್ಥಳೀಯರು ಮಾತ್ರ ಕ್ಷೇತ್ರದಲ್ಲಿ ಇರೋದಕ್ಕೆ ಅವಕಾಶವಿರುತ್ತದೆ. ಹೊರಗಿನಿಂದ ಪ್ರಚಾರಕ್ಕೆ ಬಂದಿರುವ ನಾಯಕರು ನಾಳೆ ಸಂಜೆಯೊಳಗೆ ತಮ್ಮ ಊರುಗಳಿಗೆ ವಾಪಸ್ ಹೋಗಲಿದ್ದಾರೆ.